ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಹತ್ಯೆಗೀಡಾದ ಎನ್ ಸಿಪಿ ನಾಯಕ ಬಾಬಾ ಸಿದ್ದಿಕಿ ಪುತ್ರ ಜೀಶನ್ ಸಿದ್ದಿಕಿ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ನೋಯ್ಡಾ ಮೂಲದ 20 ವರ್ಷದ ತಯ್ಯಬ್ ಎಂದು ಗುರುತಿಸಲಾಗಿದೆ. ಮುಂಬೈ ಪೊಲೀಸರು ಆತನನ್ನು ನಗರಕ್ಕೆ ಕರೆತರುತ್ತಿದ್ದಾರೆ. ಅ.25ರಂದು ಸಂಜೆ ಆರೋಪಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಜೀಶನ್ ಸಿದ್ದಿಕಿ ಅವರ ಕಚೇರಿಯಿಂದ ದೂರು ದಾಖಲಿಸಲಾಗಿತ್ತು.
ಅಕ್ಟೋಬರ್ 12 ರಂದು, ದಸರಾ ಆಚರಣೆಯ ಸಂದರ್ಭದಲ್ಲಿ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಪಟಾಕಿ ಸಿಡಿಸುವಾಗ ಬಿಷ್ಣೋಯ್ ಗ್ಯಾಂಗ್ ಸಹಚರರು ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಕೊಂದರು. ಸಿದ್ದಿಕಿ ಬಾಂದ್ರಾ ಕ್ಷೇತ್ರದ ಮಾಜಿ ಶಾಸಕರಾಗಿದ್ದರು. ಈ ವರ್ಷದ ಆರಂಭದಲ್ಲಿ ಅವರು ಕಾಂಗ್ರೆಸ್ ತೊರೆದು ಎನ್ಸಿಪಿ ಸೇರಿದ್ದರು.