ಹೊಸದಿಗಂತ ವರದಿ,ಮಂಗಳೂರು:
ದೇವೇಂದ್ರ, ರಕ್ಕಸ, ದೇವಿ ಹೀಗೆ ನಾನಾ ವೇಷಗಳನ್ನು ಹಾಕಿ ಆಟ ಪ್ರದರ್ಶಿಸುವ ಯಕ್ಷಗಾನ ಮೇಳಗಳ ಕಲಾವಿದರು ಭಾನುವಾರ ಶಿಮಂತೂರು ಶಾಲೆಯ ಮೈದಾನದಲ್ಲಿ ಕ್ರಿಕೆಟ್ ಆಟ ಆಡಿ ಸಂಭ್ರಮಿಸಿದರು.
ಕಮಲಶಿಲೆ ಮೇಳ ಶ್ರೀ ದುರ್ಗಾ ಟ್ರೋಫಿಯನ್ನು ರೂ.20000 ನಗದಿ ನೊಂದಿಗೆ ಗೆದ್ದುಕೊಂಡಿತು.
ಕಟೀಲು ಮೇಳ ರೂ. 15000 ನಗದಿ ನೊಂದಿಗೆ ರನ್ನರ್ಸ್ ಅಪ್ ಹಾಗೂ ಕೆರೆಕಾಡು ಮೇಳ ರೂ.1111 ನಗದಿನೊಂದಿಗೆ ತೃತೀಯ ಬಹುಮಾನ ಗೆದ್ದುಕೊಂಡವು.
ಕಮಲಶಿಲೆ ಮೇಳದ ಅಜಿತ್ ಮ್ಯಾನ್ ಆಫ್ ದ ಮ್ಯಾಚ್, ಮ್ಯಾನ್ ಆಫ್ ದ ಸೀರೀಸ್ ರಾಮಪ್ರಕಾಶ್ ಕಟೀಲು ಮೇಳ, ಬೆಸ್ಟ್ ಬೌಲರ್ ಕಮಲಶಿಲೆ ಮೇಳದ ವಿಕ್ರಮ್, ಬೆಸ್ಟ್ ಬ್ಯಾಟ್ಸ್ ಸಂದೇಶ್ ಬೆಳ್ಳೂರು ಕಟೀಲು ಮೇಳ, ಬೆಸ್ಟ್ ಕೀಪರ್ ಹರಿನಾರಾಯಣ ಭಟ್ ಕಟೀಲು ಮೇಳ ವಯಕ್ತಿಕ ಬಹುಮಾನಗಳನ್ನು ಪಡೆದರು.
ಕಟೀಲು ಮೇಳದ ಕಲಾವಿದರಾದ ರಾಮಪ್ರಸಾದ ಕಲ್ಲೂರಾಯ ಸಂದೇಶ ಬಡಗಬೆಳ್ಳೂರು ನೇತೃತ್ವದಲ್ಲಿ ಕಲಾವಿದರಾದ ರಾಜೇಶ್ ಕಟೀಲು, ಶ್ರೇಯಸ್ ಕಿಲೆಂಜೂರು, ಶ್ರುತಕೀರ್ತಿರಾಜ, ವಾದಿರಾಜ ಕಲ್ಲೂರಾಯ ಮೊದಲಾದವರ ಸಹಕಾರದಲ್ಲಿ ಕ್ರಿಕೆಟ್ ಪಂದ್ಯಕೂಟ ಆಯೋಜಿಸಲಾಗಿತ್ತು. ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಆಸ್ರಣ್ಣ ಬಂಧುಗಳ ಯಕ್ಷಗಾನ ಅಭಿಮಾನಿ ದಾನಿಗಳ ಸಹಕಾರದಲ್ಲಿ ಟೂರ್ನಮೆಂಟ್ ಆಯೋಜಿಸಲಾಗಿತ್ತು.
ಶಾಸಕ ಉಮಾನಾಥ ಕೋಟ್ಯಾನ್, ಶ್ರೀಪತಿ ಭಟ್, ಹರಿಕೃಷ್ಣ ಪುನರೂರು ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಪಂದ್ಯಾಟ ಉದ್ಘಾಟಿಸಲಾಗಿತ್ತು.
ಆಟದವರ ಆಟ
ಕಟೀಲು ಮೇಳದವರ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರಿಗೆ ಕ್ರಿಕೆಟ್ ಪಂದ್ಯಕೂಟ ಆಯೋಜಿಸಲಾಗಿತ್ತು. ಸಸಿಹಿತ್ಲು. ಪಾವಂಜೆ, ಕಟೀಲು ಆರು ಮೇಳಗಳಲ್ಲಿ ಮೂರು, ನಾಲ್ಕು ಹಾಗೂ ಐದನೇ ಮೇಳಗಳು, ಕೆರೆಕಾಡು ಮೇಳ, ಕೂಡ್ಲು ಮೇಳ, ಕಮಲಶಿಲೆ ಮೇಳ, ಮಂದಾರ್ತಿ ಮೇಳದ ಎರಡು ತಂಡ, ಹಿರಿಯಡ್ಕ ಧರ್ಮಸ್ಥಳ ಸೇರಿದಂತೆ ಒಟ್ಟು ಹದಿಮೂರು ಮೇಳಗಳು ಈ ಶ್ರೀ ದುರ್ಗಾ ಟ್ರೋಫಿ ಕ್ರಿಕೆಟ್ ಪಂದ್ಯಕೂಟದಲ್ಲಿ ಭಾಗವಹಿಸಿದ್ದವು. ಉಭಯ ತಿಟ್ಟುಗಳ ಹದಿಮೂರು ಮೇಳಗಳ ಕಲಾವಿದರು ಭಾಗವಹಿಸಿದ್ದರು. ಪ್ರತಿ ಮೇಳಕ್ಕೆ ಐದು ಕೆಜಿ ಅಕ್ಕಿ ಸ್ಮರಣಿಕೆ ನೀಡಲಾಯಿತು.