ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸಂಸ್ಕೃತಿಯ ಅಭ್ಯುದಯವಾಗಿರುವ ಸಾಂಸ್ಕೃತಿಕ ಕಾಶಿ ಕಲ್ಲಡ್ಕವಾಗಿದ್ದು, ಡಾ.ಪ್ರಭಾಕರ್ ಭಟ್ ಶಾಲೆಯನ್ನು ಮಾದರಿಯಾಗಿ ರೂಪಿಸಿದ್ದಾರೆ. ಕರ್ನಾಟಕದ ಆಯ್ದ ೨೦ ಕನ್ನಡ ಶಾಲೆಗಳನ್ನು ಕಲ್ಲಡ್ಕದಲ್ಲಿ ಸನ್ಮಾನಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕರ್ನಾಟಕ ಅಧ್ಯಕ್ಷ ಡಾ.ನಾ. ಮೊಗಸಾಲೆ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಕನ್ನಡ ಶಾಲೆಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ ಸಂವಹನ ಮಾಧ್ಯಮವಾಗಿದೆ. ಭಾಷೆ ಒಂದಕ್ಕೊಂದು ಪೂರಕ. ಇಂಗ್ಲಿಷ್‌ನಿಂದಲೇ ಉದ್ಧಾರ ಎಂಬುದು ಭ್ರಮೆ ಎಂದರು.
ದಿಕ್ಸೂಚಿ ಭಾಷಣಗೈದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕರ್ನಾಟಕ ಪ್ರಾಂತ ಸಂಚಾಲಕ ನಾರಾಯಣ ಶೇವಿರೆ ಮಾತನಾಡಿ, ಭಾರತದಲ್ಲಿರುವ ಎಲ್ಲಾ ಭಾಷೆಗಳು ರಾಷ್ಟ್ರ ಭಾಷೆಗಳೇ. ಭಾಷೆಯ ವಿಷಯದಲ್ಲಿ ಹೋರಾಟ ಬೇಡ. ಯಾವ ಭಾಷೆಯನ್ನು ದ್ವೇಷಿಸ ಬೇಕಾಗಿಲ್ಲ. ವ್ಯವಹಾರಕ್ಕೆ ಎಲ್ಲಾ ಭಾಷೆ ಗಳು ಬೇಕು. ನಮ್ಮ ಪರಿಸರದ ಭಾಷೆ, ಸಂವಹನದ ಭಾಷೆ ಕನ್ನಡ ಉಳಿಯಬೇಕು ಎಂದರು.
ಚಿಂತನ ಮಂಥನಕ್ಕೆ ಮಾತೃಭಾಷೆಯ ಅಗತ್ಯವಿದ್ದು, ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಮಾತೃಭಾಷೆಯ ಶಿಕ್ಷಣದಿಂದಲೇ ಆಗುತ್ತದೆ. ಕನ್ನಡ ಶಾಲೆ ಸಮರ್ಥವಾಗಿ ಕಾರ್ಯ ನಿರ್ವಹಿಸಿರುವುದಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರವೇ ಮಾದರಿಯಾಗಿದೆ ಎಂದರು.
ಇದೇ ವೇಳೆ ಕರ್ನಾಟಕದ ೨೦ ಆಯ್ದ ಶಾಲೆಗಳ ಆಡಳಿತ ಮಂಡಳಿ ಮುಖ್ಯಸ್ಥರು, ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಲಾ ಯಿತು. ಹಾಗೆಯೇ ಸಂಸ್ಥೆಗೊಂದು ‘ಲಕ್ಷಣಫಲ’ ಗಿಡ ಹಾಗೂ ಸ್ಮರಣಿಕೆ ನೀಡಿ ಡಾ. ಪ್ರಭಾಕರ ಭಟ್, ರಘನಂದನ್ ಭಟ್, ಡಾ.ನಾ. ಮೊಗಸಾಲೆ ಅವರು ಸನ್ಮಾನಿಸಿದರು.
ರಾಜ್ಯ ಕಾರ್ಯದರ್ಶಿಗಳಾದ ರಘುನಂದನ್ ಭಟ್, ಮಾಧವ ಎಂ.ಕೆ., ಪಾದೆಕಲ್ಲು ವಿಷ್ಣುಭಟ್, ಜಿಲ್ಲಾಧ್ಯಕ್ಷ ಚ.ನ. ಶಂಕರರಾವ್, ತಾಲೂಕು ಅಧ್ಯಕ್ಷ ಸುರೇಶ್ ನೆಗಳಗುಳಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಶ್ರೀನಾಥ್ ಉಜಿರೆ, ಕಸಾಪ ರಾಜ್ಯ, ಜಿಲ್ಲಾ ಪದಾಧಿಕಾರಿಗಳು ಇದ್ದರು. ಶ್ರೀರಾಮ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಗೋಪಾಲ್ ಶ್ರೀಮಾನ್ ಸ್ವಾಗತಿಸಿದರು. ನ್ಯಾಯವಾದಿ ಪರಿಮಳ ಹಾಗೂ ಶುಭಾಷಿಣಿ ನಿರೂಪಿಸಿದರು.