ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬಿಡುಗಡೆಯಾಗಿರುವ ಸಾಮ್ರಾಟ್ ಪೃಥ್ವಿರಾಜ್ ಚಿತ್ರವನ್ನು ವೀಕ್ಷಿಸಿದ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಅವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಚಿತ್ರವು ಭಾರತೀಯ ದೃಷ್ಟಿಕೋನದ ಇತಿಹಾಸವನ್ನು ಕಟ್ಟಿಕೊಡುತ್ತದೆ. ಚಿತ್ರವು ಸತ್ಯಗಳನ್ನು ಆಧರಿಸಿದೆ. ಚಿತ್ರ ನೀಡುವ ಸಂದೇಶ ಸದ್ಯ ದೇಶಕ್ಕೆ ಬೇಕಾಗಿದೆ. ಇದುವರೆಗೆ ನಾವು ಬೇರೆಯವರು ಬರೆದ ಇತಿಹಾಸವನ್ನು ಓದುತ್ತಿದ್ದೆವು. ಈಗ ನಾವು ಇತಿಹಾಸವನ್ನು ಭಾರತೀಯ ದೃಷ್ಟಿಕೋನದಿಂದ ನೋಡುತ್ತಿರುವುದು ಉತ್ತಮ ಸಂಗತಿ. ಈ ಚಿತ್ರದಲ್ಲಿ ತೋರಿಸಿರುವ ಪ್ರಬಲ ವೀರರಂತೆ ಭಾರತದ ಗೌರವವನ್ನು ರಕ್ಷಿಸಲು ಭಾರತೀಯರು ಒಟ್ಟಾಗಿ ಹೋರಾಡಬೇಕು” ಎಂದು ಅವರು ಪ್ರಶಂಸಿಸಿದ್ದಾರೆ.
ದೆಹಲಿಯ ಚಾಣಕ್ಯಪುರಿ ಪಿವಿಆರ್‌ನಲ್ಲಿ ರಾ.ಸ್ವ.ಸೇ.ಸಂಘದ ಪದಾಧಿಕಾರಿಗಳಿಗೆಂದೇ ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಘದ ಪದಾಧಿಕಾರಿಗಳಾದ ಸಂಘದ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕೃಷ್ಣ ಗೋಪಾಲ, ಮನಮೋಹನ್ ವೈದ್ಯ, ಭಯ್ಯಾಜಿ ಜೋಶಿ, ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಡ್ಕರ್, ಸಹ-ಪ್ರಚಾರ ಮುಖ್ಯಸ್ಥ ನರೇಂದ್ರ ಠಾಕೂರ್ ಅವರೊಂದಿಗೆ ನಟ ಅಕ್ಷಯ್ ಕುಮಾರ್ ಈ ಚಿತ್ರವನ್ನು ವೀಕ್ಷಿಸಿದರು.