ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟಿ ಸಮಂತಾ ಇತ್ತೀಚೆಗೆ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಹಾಗೂ ನಿರ್ಮಾಪಕಿಯಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ‘ಶುಭಂ’ ಎಂಬ ಚಿತ್ರವನ್ನು ನಿರ್ಮಿಸಿರುವ ಅವರು, ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡರು. ಅದರ ಜತೆಗೆ, ‘ರಕ್ತ ಬ್ರಹ್ಮಾಂಡ: ದಿ ಬ್ಲಡಿ ಕಿಂಗ್‌ಡಮ್’ ಎಂಬ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಇನ್ನು, ನಂದಿನಿ ರೆಡ್ಡಿ ನಿರ್ದೇಶನದ ‘ಮಾ ಇಂಟಿ ಬಂಗಾರಂ’ ಸಿನಿಮಾದ ನಿರ್ಮಾಣ ಕೆಲಸವನ್ನೂ ಕೈಗೆತ್ತಿಕೊಂಡಿದ್ದಾರೆ.
ಆದರೆ, ಇವತ್ತಿನ ಟೀ ಟೈಮ್ ಟಾಪಿಕ್ ಅವರ ಕೈಯಲ್ಲಿ ಕಾಣಿಸಿಕೊಂಡಿರುವ ಉಂಗುರ. ಇತ್ತೀಚೆಗೆ ಸಮಂತಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಕೈಯಲ್ಲಿರುವ ಒಂದು ಹೊಸ ಉಂಗುರ ಕಂಡುಬಂದಿದೆ. ಈ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ನಡುವೆ ನಿಶ್ಚಿತಾರ್ಥದ ವದಂತಿಗೆ ಎಡೆಮಾಡಿ ಕೊಟ್ಟಿದೆ. ಇದಕ್ಕೂ ಮುಂಚೆ, ನಿರ್ದೇಶಕ ರಾಜ್ ನಿಧಿಮೋರು ಜೊತೆಗೆ ಲಂಡನ್‌ನ ಬೀದಿಗಳಲ್ಲಿ ತಿರುಗಾಡುತ್ತಿದ್ದ ಫೋಟೋಗಳು ಸಹ ವೈರಲ್ ಆಗಿದ್ದವು. ಇತ್ತೀಚೆಗೆ ಇಬ್ಬರು ಒಂದೇ ಕಾರಿನಲ್ಲಿ ತೆರಳಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಬಹು ಚರ್ಚಿತವಾಗಿದೆ.
‘ಫ್ಯಾಮಿಲಿಮ್ಯಾನ್ 2’ ಮತ್ತು ‘ಸಿಟಾಡೆಲ್: ಹನಿ ಬನಿ’ ವೇಬ್ ಸರಣಿಗಳಲ್ಲಿ ರಾಜ್ ನಿರ್ದೇಶನದಡಿ ಸಮಂತಾ ನಟಿಸಿದ್ದರು. ಈ ಸಮಯದಲ್ಲಿಯೇ ಅವರಿಬ್ಬರ ಮಧ್ಯೆ ಸಮೀಪತೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇಬ್ಬರೂ ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಸಮಂತಾ ಅವರ ಹೊಸ ಜೀವನದ ಕುರಿತು ಅಭಿಮಾನಿಗಳು ಸಾಕಷ್ಟು ಕುತೂಹಲದಲ್ಲಿದ್ದಾರೆ. ಆದರೆ ಈ ಹಿಂದೆ ಕಾಣಿಸದ ಉಂಗುರ, ಈಗ ದಿಢೀರ್ ಹೊಳೆಯುತ್ತಿದ್ದ ಕಾರಣ, ಹೊಸ ಸಂಬಂಧದ ಸುಳಿವು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.