ಹೊಸದಿಗಂತ ವರದಿ, ಮುಂಡಗೋಡ:
ಪಟ್ಟಣದ ಹಳೂರ ಓಣೆಯ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಸುಮಾರು ೧ ಲಕ್ಷ ರೂಪಾಯಿ ಬೆಲೆ ಬಾಳುವ ಶ್ರೀಗಂಧದ ಮರ ಕಡಿದು ಮನೆಯೊಂದರ ಆವರಣದಲ್ಲಿ ಶೇಖರಿಸಿಟ್ಟಿದ್ದ ಮಾಹಿತಿ ಪಡೆದ ಅರಣ್ಯ ಸಿಬ್ಬಂದಿಗಳು ವಶಪಡಿಸಿಕೊಂಡ ಘಟನೆ ಜರುಗಿದೆ.
ನಾಗರಾಜ ಜಿ.ಬಿ ಎಂಬುವ ಮನೆಯ ಹಿತ್ತಲಿನಲ್ಲಿ ಶ್ರೀಗಂಧದ ಮರಗಳ ತುಂಡುಗಳನ್ನು ಶೇಖರಿಸಿಡಲಾಗಿತ್ತು. ಗುರುವಾರ ಸಾಯಂಕಾಲ ಪುರಾತನ ಆಂಜನೇಯ ದೇವಸ್ಥಾನಕ್ಕೆ ಸಂಬಂದಿಸಿದ ಗದ್ದೆಯಲ್ಲಿ ಸುಮಾರು ೧೫ ವರ್ಷದ ಶ್ರೀಗಂಧದ ಮರವನ್ನು ಅಕ್ರಮವಾಗಿ ಕಡಿದು ಮನೆಯ ಹಿತ್ತಲಿನಲ್ಲಿ ಶೇಖರಿಸಿಡಲಾಗುತ್ತಿತ್ತು ಯಾರೋ ಸ್ಥಳಿಯರು ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸ್ ರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ದಾವಿಸಿದ ಅರಣ್ಯ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಶ್ರೀಗಂಧದ ಮರದ ಕಟ್ಟಿಗೆಯನ್ನು ವಶಕ್ಕೆ ಪಡೆದು ಮನೆಯ ಮಾಲೀಕ ನಾಗರಾಜ ಅವರಿಗೆ ವಿಚಾರಿಸಿದಾಗ ನಾನೆ ಕಡಿಸಿದ್ದು ಗಂಧದ ಮರ ಎಂಬುದು ನನಗೆ ತಿಳಿದಿಲ್ಲಾ ಎಂದು ಹೇಳಿದರು. ಆದರೆ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು ತಮ್ಮ ಜಾಗೆಯಲ್ಲಿ ಇಟ್ಟಿರುವುದು ಎಷ್ಟು ಸರಿ ಎಂದು ಅರಣ್ಯ ಇಲಾಖೆಯವರು ಮನೆಯ ಮಾಲೀಕನನನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳ ಬಹುದು ಎಂದು ಅರಣ್ಯ ಸಿಬ್ಬಂದಿಗಳು ಅಂದಾಜಿಸಿದ್ದಾರೆ.
ಪ್ರಕರಣ ಮುಚ್ಚಲು ಅಧಿಕಾರಿಗಳ ಯತ್ನ: ಮನೆಯ ಆವರಣದಲ್ಲಿ ಇಟ್ಟಿದ್ದ ಕಟ್ಟಿಗೆಯನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ತಮ್ಮ ಕಚೇರಿಗೆ ಮಾಲೀಕನನ್ನು ಕರೆದೊಯುತ್ತಿರಬೇಕಾದರೆ. ಹಲವು ರಾಜಕಾರಣೆಗಳ ಪೋನ್ ಕರೆಗಳು ಇಲಾಖೆಯ ಸಿಬ್ಬಂದಿಗಳಿಗೆ ಪ್ರಕರಣ ಮುಚ್ಚಿಹಾಕುವಂತೆ ಒತ್ತಾಯ ಮಾಡುತ್ತಿರುವುದು ಕಂಡು ಬಂದಿತು.
ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿ ಆರೋಪಿಗಳು ಇಲ್ಲವೆಂದು ಪ್ರಕರಣಕ್ಕೆ ಎಳ್ಳು ನೀರು ಬೀಡುವವರೆ ಕಾದು ನೋಡ ಬೇಕಾಗಿದೆ.