ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂದೇಶ್‍ಖಾಲಿ ಹಿಂಸಾಚಾರ ಪ್ರಕರಣದ ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ಇದರ ಜೊತೆಗೆ ತೃಣಮೂಲ ಕಾಂಗ್ರೆಸ್‍ನ ಮಾಜಿ ನಾಯಕ , ಸಂದೇಶ್‍ಖಾಲಿಯ ಪ್ರಬಲ ನಾಯಕ ಶೇಖ್ ಷಹಜಹಾನ್‍ನನ್ನು ಸಿಬಿಐ ವಶಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಪಶ್ಚಿಮ ಬಂಗಾಳ ಪೊಲೀಸರಿಗೆ ಆದೇಶಿಸಿದೆ.
ತೃಣಮೂಲ ಕಾಂಗ್ರೆಸ್‍ನ ಮಾಜಿ ನಾಯಕ ಶೇಖ್ ಷಹಜಹಾನ್ ಮನೆ ಮೇಲೆ ದಾಳಿ ನಡೆಸಲು ಜಾರಿ ನಿರ್ದೇಶನಾಲಯ (ಇಡಿ) ತಂಡ ಹೊರಟಿದ್ದ ವೇಳೆ ಅಧಿಕಾರಿಗಳನ್ನು ತಡೆದು ಕಿಡಿಗೇಡಿಗಳ ಗುಂಪು ದಾಳಿ ನಡೆಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸಿದೆ.
ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಅವರಿದ್ದ ಏಕಸದಸ್ಯ ಪೀಠವು ನಜತ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಸಂಖ್ಯೆ 8 ಮತ್ತು 9 ಮತ್ತು ಬಂಗಾವ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಸಂಖ್ಯೆ 18ನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಆದೇಶಿಸಿದೆ. ಈ ಹಿಂದೆ, ಸಂದೇಶಖಾಲಿ ಘಟನೆಯ ತನಿಖೆಗಾಗಿ ಹೈಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಿತ್ತು. ಇದೀಗ ವಿಭಾಗೀಯ ಪೀಠವು ಎಸ್‍ಐಟಿಯನ್ನು ರದ್ದುಗೊಳಿಸಿ ಸಿಬಿಐ ತನಿಖೆಗೆ ಆದೇಶಿಸಿದೆ.
ಪಡಿತರ ಹಗರಣ ಪ್ರಕರಣದಲ್ಲಿ ಷಹಜಹಾನ್ ಮನೆ ಮೇಲೆ ಜ.5 ರಂದು ಇಡಿ ಅಧಿಕಾರಿಗಳು ದಾಳಿಗೆ ತೆರಳುತ್ತಿದ್ದಾಗ, ಆರೋಪಿಯ ಬೆಂಬಲಿಗರು ದಾಳಿ ಮಾಡಿದ್ದರು.ಬಳಿಕ ಷಹಜಹಾನ್ ತಪ್ಪಿಸಿಕೊಂಡಿದ್ದ, 55 ದಿನಗಳ ಬಳಿಕ ಆತನ ಬಂಧನವಾಗಿತ್ತು.