ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಷ್ಪಾ 2 ಸಿನಿಮಾ ರಿಲೀಸ್ ಟೈಮ್‌ನಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಉಂಟಾಗಿತ್ತು. ಈ ಅವಘಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಬಾಲಕನೊಬ್ಬನಿಗೆ ಗಂಭೀರ ಗಾಯವಾಗಿತ್ತು. ಇದೀಗ ಆತನ ಆರೋಗ್ಯದ ಬಗ್ಗೆ ಮಾಹಿತಿ ಸಿಕ್ಕಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕ ಶ್ರೀತೇಜ ಅನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕನನ್ನು ಹಲವು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಯ್ತು. ಬಾಲಕನ ಆಸ್ಪತ್ರೆಗೆ ದಾಖಲಿಸಿ ಮೂರು ತಿಂಗಳಾಗಿದ್ದರೂ ಸಹ ಬಾಲಕನ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡು ಬಂದಿಲ್ಲ. ಕೆಲ ದಿನದ ಹಿಂದಷ್ಟೆ ಕಿಮ್ಸ್ನ ವೈದ್ಯರು ಬಾಲಕ ಶ್ರೀತೇಜ ಆರೋಗ್ಯದ ಬಗ್ಗೆ ಬುಲೆಟಿನ್ ಬಿಡುಗಡೆ ಮಾಡಿದ್ದು, ಬಾಲಕನ ಆರೋಗ್ಯದಲ್ಲಿ ತುಸುವಷ್ಟೆ ಚೇತರಿಕೆ ಬಂದಿದೆ ಎಂದಿದ್ದಾರೆ.
ವೈದ್ಯರು ಹೇಳಿರುವಂತೆ ಬಾಲಕನಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಅನ್ನು ತೆಗೆದಿದ್ದು ಶ್ರೀತೇಜ ಈಗ ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದಾನಂತೆ. ಶ್ರೀತೇಜನಿಗೆ ಎಂಡೋಸ್ಕೋಪಿಕ್ ಗ್ಯಾಸ್ಟ್ರೋಟಮಿ ಕ್ರಿಯೆಯ ಮೂಲಕ ಆಹಾರವನ್ನು ನೇರವಾಗಿ ಹೊಟ್ಟೆಗೆ ತಲುಪಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಬಾಲಕನ ಅಂಗಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ಬಾಲಕನಿಗೆ ಪ್ರತಿದಿನ ಫಿಸಿಯೋಥೆರಪಿ ಮಾಡಿಸಲಾಗುತ್ತಿದೆ. ಆದರೆ ಶ್ರೀತೇಜ ತನ್ನ ಕುಟುಂಬದವರನ್ನು ಗುರುತು ಹಿಡಿಯುತ್ತಿಲ್ಲ ಎಂದು ಸಹ ವೈದ್ಯರು ಹೇಳಿದ್ದಾರೆ.