ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದೆ . ಇದೀಗ ಎರಡನೇ ಪಂದ್ಯಕ್ಕೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ.
ತಂಡದ ಸಂಜು ಸ್ಯಾಮ್ಸನ್ 2ನೇ ಟಿ20 ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.
ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಡೈವಿಂಗ್ ಮೂಲಕ ಕ್ಯಾಚ್ ಹಿಡಿಯುವ ಪ್ರಯತ್ನ ಮಾಡಿದ್ದರು. ಈ ವೇಳೆ ಮೊಣಕಾಲಿಗೆ ಗಾಯವಾಗಿತ್ತು. ಇದೀಗ ಟೀಂ ಇಂಡಿಯಾ ಎರಡನೇ ಪಂದ್ಯಕ್ಕಾಗಿ ಮುಂಬೈನಿಂದ ಪುಣೆಗೆ ಪ್ರಯಾಣ ಮಾಡಿದೆ. ಆದರೆ ಸಂಜು ಸ್ಯಾಮ್ಸನ್ ಮುಂಬೈನಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ 2ನೇ ಪಂದ್ಯಕ್ಕೆ ಬಹುತೇಕ ಅಲಭ್ಯರಾಗಿದ್ದಾರೆ.
ಮೊದಲ ಓವರ್‌ನಲ್ಲಿ ಪಥುಮ್ ನಿಸಂಕ ಅವರ ಕ್ಯಾಚನ್ನು ಡೈವ್ ಮೂಲಕ ಹಿಡಿಯುವ ಪ್ರಯತ್ನ ಮಾಡಿದ್ದರು. ಆದರೆ ಕ್ಯಾಚ್ ಡ್ರಾಪ್ ಆಗಿತ್ತು. ಇತ್ತ ಸಂಜು ಸ್ಯಾಮ್ಸನ್ ಗಾಯಗೊಂಡಿದ್ದರು. ಆದ್ರೂ ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ ಸಂಪೂರ್ಣವಾಗಿ ಫೀಲ್ಡಿಂಗ್ ಮಾಡಿದ್ದರು. ಪಂದ್ಯದ ಬಳಿಕ ಹೊಟೆಲ್‌ಗೆ ತೆರಳಿದ ಸಂಜು ಸ್ಯಾಮ್ಸನ್ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿದೆ.
ಹೀಗಾಗಿ ಟೀಂ ಇಂಡಿಯಾ ಪುಣೆಗೆ ಪ್ರಯಾಣ ಮಾಡಿದರೆ, ಸಂಜು ಸ್ಯಾಮ್ಸನ್ ಮುಂಬೈನಲ್ಲೇ ಉಳಿದುಕೊಂಡಿದ್ದಾರೆ. ಇತ್ತ ಜನವರಿ 5 ರಂದು ಸಂಜೆ 2ನೇ ಟಿ20 ಪಂದ್ಯ ನಡೆಯಲಿದೆ. ಇನ್ನೊಂದು ದಿನದಲ್ಲಿ ಸಂಜು ಸ್ಯಾಮ್ಸನ್ ಚೇತರಿಸಿಕೊಳ್ಳುವುದು ಕಷ್ಟವಾಗಿದೆ. ಹೀಗಾಗಿ 2ನೇ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.