March 26, 2026
Thursday, March 26, 2026
spot_img

ದಾಂಡೇಲಿಯಲ್ಲಿ ಇಂಧನ ಆತಂಕ: ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ಕಿಲೋಮೀಟರ್ ಉದ್ದದ ಸಾಲು!

ಹೊಸದಿಗಂತ ದಾಂಡೇಲಿ:

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಕಾರ್ಮೋಡಗಳು ದಾಂಡೇಲಿ ನಗರದ ಮೇಲೂ ನೆರಳು ಬೀರಿದ್ದು, ಇಂಧನ ಕೊರತೆಯ ಭೀತಿಯಿಂದಾಗಿ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರು ಸಾಲುಗಟ್ಟಿ ನಿಂತಿದ್ದಾರೆ.

ಇರಾನ್ ದೇಶವು ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಎಚ್ಚರಿಕೆ ನೀಡಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಇದರ ನೇರ ಪರಿಣಾಮವಾಗಿ, ದಾಂಡೇಲಿ ನಗರದ ಪ್ರಮುಖ ಎರಡು ಪೆಟ್ರೋಲ್ ಬಂಕ್‌ಗಳಲ್ಲಿ ಗುರುವಾರ ಜನಜಂಗುಳಿ ಮುಗಿಬಿದ್ದಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿವೆ ಅಥವಾ ಇಂಧನ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಲಿದೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ ವಾಹನ ಸವಾರರು, ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ವಾಹನಗಳ ಟ್ಯಾಂಕ್‌ಗಳನ್ನು ಭರ್ತಿ ಮಾಡಿಕೊಳ್ಳಲು ಮುಗಿಬೀಳುತ್ತಿದ್ದಾರೆ.

ನಗರದ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ಉದ್ದುದ್ದನೆಯ ಸರತಿ ಸಾಲು ಕಂಡುಬಂದಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ಧ ಸನ್ನಿವೇಶವು ಸದ್ಯಕ್ಕೆ ತಣ್ಣಗಾಗದಿದ್ದರೆ ಇಂಧನ ದರ ಗಗನಕ್ಕೇರಬಹುದು ಎಂಬ ಭೀತಿಯಲ್ಲಿ ಜನರು ತಾಳ್ಮೆ ಕಳೆದುಕೊಂಡು ಗಂಟೆಗಟ್ಟಲೆ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !