ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಬಹುಭಾಷಾ ನಟಿ, ಹಿರಿಯ ಕಲಾವಿದೆ ಸರೋಜಾದೇವಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕಣ್ಣುಗಳನ್ನು ದಾನ ಮಾಡಲಾಗಿದೆ.
ಕತ್ತಲೆಯಲ್ಲಿ ಜೀವನ ನಡೆಸುತ್ತಿರೋ ಅಂಧರಿಗೆ ನೇತ್ರದಾನ ಮಾಡುವುದು ಪುಣ್ಯದ ಕೆಲಸ. ನೇತ್ರದಾನ ಮಾಡುವಂತೆ ವರನಟ ಡಾ.ರಾಜ್‌ಕುಮಾರ್ ಕೂಡ ಕರೆ ಕೊಟ್ಟಿದ್ದರು. ತಮ್ಮ ಕಣ್ಣುಗಳನ್ನು ಡಾ.ರಾಜ್‌ಕುಮಾರ್ ದಾನ ಮಾಡಿದ್ದರು. ಡಾ.ರಾಜ್‌ಕುಮಾರ್ ಹಾದಿಯನ್ನು ಅನುಸರಿಸಿ ಅನೇಕರು ನೇತ್ರದಾನ ಮಾಡಿದ್ದಾರೆ. ಇದೀಗ ಹಿರಿಯ ನಟಿ ಸರೋಜಾದೇವಿ ಅವರ ಕಣ್ಣುಗಳನ್ನೂ ದಾನ ಮಾಡಲಾಗಿದೆ.
ನಟಿ ಸರೋಜಾದೇವಿ ಅವರು ಇಂದು ಬೆಳಗ್ಗೆ 8.00 ಗಂಟೆಗೆ ನಿಧನರಾಗಿದ್ದಾರೆ. ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ನಾಯಕಿಯಾಗಿ ಮೆರೆದಿದ್ದ ಸರೋಜಾದೇವಿ ಅವರು ವಯೋಸಹಜ ಕಾಯಿಲೆಯಿಂದ 87 ವರ್ಷಕ್ಕೆ ವಿಧಿವಶರಾಗಿದ್ದಾರೆ.
1938ರ ಜನವರಿ 7 ರಂದು ಬೆಂಗಳೂರಿನಲ್ಲಿ ಜನಿಸಿದ ಬಿ ಸರೋಜಾದೇವಿ ಅಂದಿನ ಕಾಲದಲ್ಲೇ ಮೊದಲ ಲೇಡಿ ಸೂಪರ್‌ಸ್ಟಾರ್ ಆಗಿದ್ದವರು. 1962ರಲ್ಲಿ ಪ್ರಸಾರವಾದ ‘ಕಿತ್ತೂರ ರಾಣಿ ಚೆನ್ನಮ್ಮ’ ಸಿನಿಮಾದಲ್ಲಿ ಬಿ ಸರೋಜಾದೇವಿ ಅವರು ನಟಿಸಿದ್ದರು.
ಈಗಾಗಲೇ ನಟಿಯ ಕಣ್ಣುಗಳನ್ನ ನಾರಾಯಣ ನೇತ್ರಾಲಾಯದ ವೈದ್ಯರು ತೆಗೆದುಕೊಂಡು ಹೋಗಿದ್ದಾರೆ. ನಾಳೆ ನಟಿ ಸರೋಜಾದೇವಿ ಅವರ ಅಂತ್ಯ ಸಂಸ್ಕಾರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಣ್ವ ಡ್ಯಾಮಿನ ಪಕ್ಕದಲ್ಲೇ ಇರೋ ದಶಾವರದಲ್ಲಿ ಕುಟುಂಬಸ್ಥರು ಮಾಡಲಿದ್ದಾರೆ. ಒಕ್ಕಲಿಗ ಸಂಪ್ರದಾಯದಂತೆ ವಿಧಿ ವಿಧಾನಗಳು ನೆರವೇರಲಿವೆ.