ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕರ ಮನಗೆಲ್ಲಲು ಮತ್ತು ಸಚಿವರ ವಿಶ್ವಾಸ ಗಳಿಸಲು ನಿರಂತರವಾಗಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಸಚಿವ ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್ ಖಾನ್ ಮತ್ತು ಪ್ರಿಯಾಂಕ್ ಖರ್ಗೆ ಅವರೊಂದಿಗೆ ಇತ್ತೀಚೆಗೆ ನಡೆಸಿದ ಸರಣಿ ಮಾತುಕತೆಗಳು ಈ ಪ್ರಯತ್ನಕ್ಕೆ ಸಾಕ್ಷಿ. ಈ ಬೆಳವಣಿಗೆಗಳ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿಯವರನ್ನು ಡಿ.ಕೆ. ಶಿವಕುಮಾರ್ ಭೇಟಿಯಾಗಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ, ಸತೀಶ್ ಜಾರಕಿಹೊಳಿ ಅವರು ಇಂದು ಶಾಸಕರೊಂದಿಗೆ ನಡೆಸಿದ ‘ಲಂಚ್ ಮೀಟಿಂಗ್’ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗುಪ್ತ ಸಭೆ, ಗೌಪ್ಯ ಚರ್ಚೆ
ಸತೀಶ್ ಜಾರಕಿಹೊಳಿ ಅವರು ಮೊದಲು ಶಾಸಕರ ಭವನದಲ್ಲಿ ಸಭೆ ನಡೆಸಿದರು. ನಂತರ, ಆಯ್ದ ಶಾಸಕರನ್ನು ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಕರೆದೊಯ್ದು ಊಟದೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಶಾಸಕರಾದ ಆಸೀಫ್ ಸೇಠ್, ಕಂಪ್ಲಿ ಗಣೇಶ್, ವಿಶ್ವಾಸ್ ವೈದ್ಯ, ಬಾಬಾಸಾಹೇಬ್ ಪಾಟೀಲ್, ಯಾಸೀರ್ ಖಾನ್ ಪಠಾಣ್, ಪ್ರಕಾಶ್ ಕೋಳಿವಾಡ, ಪಾವಗಡ ವೆಂಕಟೇಶ್ ಮತ್ತು ಹಂಪಯ್ಯ ನಾಯಕ್ ಭಾಗವಹಿಸಿದ್ದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಭೇಟಿಯಾದ ತಕ್ಷಣವೇ, ಸಿದ್ದರಾಮಯ್ಯ ಬಣದ ಪ್ರಮುಖ ನಾಯಕರಾದ ಸತೀಶ್ ಜಾರಕಿಹೊಳಿ ಅವರು ಶಾಸಕರೊಂದಿಗೆ ಸಭೆ ನಡೆಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಇದು ಸರ್ಕಾರದ ಕಾರ್ಯವೈಖರಿ, ಶಾಸಕರ ಅಸಮಾಧಾನ ಅಥವಾ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ತಂತ್ರಗಳಿಗೆ ಕೌಂಟರ್ ಕೊಡುವ ಪ್ರಯತ್ನವೇ ಎಂಬ ಪ್ರಶ್ನೆಗಳು ಎದ್ದಿವೆ. ಸತೀಶ್ ಜಾರಕಿಹೊಳಿ ಅವರ ಈ ನಡೆ ಕಾಂಗ್ರೆಸ್‌ನ ಆಂತರಿಕ ರಾಜಕಾರಣದಲ್ಲಿ ಮತ್ತೊಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಬಹುದೇ ಎಂಬ ಚರ್ಚೆಗಳು ಶುರುವಾಗಿವೆ.

