ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇ 5 ರಂದು ರಾಜ್ಯದಾದ್ಯಂತ ಪ್ರಾರಂಭಿಸಲಾಗಿದ್ದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಭಾನುವಾರ ಕೊನೆಗೊಂಡಿದೆ. ಸದ್ಯದಲ್ಲಿಯೇ ವರದಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಆಯೋಗ ಮಾಹಿತಿ ನೀಡಿದೆ.
ಆಂತರಿಕ ಮೀಸಲಾತಿಯನ್ನು ನಿರ್ಧರಿಸಲು ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು ಸಮೀಕ್ಷೆಯ ಮೇಲ್ವಿಚಾರಣೆಯನ್ನು ವಹಿಸಿತ್ತು. ಸಮೀಕ್ಷೆಯು ಮೇ 5 ರಂದು ಪ್ರಾರಂಭವಾಯಿತು. ಆರಂಭದಲ್ಲಿ ಮೇ 23 ರಂದು ಸಮೀಕ್ಷಾ ಕಾರ್ಯ ಅಂತ್ಯಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹಲವಾರು ಬಾರಿ ಮುಂದೂಡಲಾಗಿತ್ತು.
ರಾಜ್ಯಾದ್ಯಂತ ಸಮೀಕ್ಷಾ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.50 ಪೂರ್ಣಗೊಂಡಿದೆ ಎನ್ನಲಾಗಿದೆ.
ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು, ರಾಜ್ಯದಾದ್ಯಂತ ಸಮೀಕ್ಷೆ ಉತ್ತಮ ರೀತಿಯಲ್ಲಿ ನಡೆದಿದ್ದರು, ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮಗೆ ಇನ್ನೂ ದತ್ತಾಂಶ ತಲುಪಿಲ್ಲ. ದತ್ತಾಂಶವನ್ನು ವಿಶ್ಲೇಷಿಸಬೇಕಿದ್ದು, ಸಮಯವನ್ನು ವ್ಯರ್ಥ ಮಾಡದೆ ವರದಿಯನ್ನು ಸಲ್ಲಿಸುತ್ತೇವೆಂದು ತಿಳಿಸಿದ್ದಾರೆ.
ಸಚಿವ ಕೆ.ಎಚ್. ಮುನಿಯಪ್ಪ ಅವರು ಪ್ರತಿಕ್ರಿಯಿಸಿ, ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ಆಯೋಗವು ಶೀಘ್ರದಲ್ಲೇ ತನ್ನ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುತ್ತದೆ. ನಂತರ ನಾವು ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ. ಮುಂಬರುವ ಶಾಸಕಾಂಗ ಅಧಿವೇಶನದಲ್ಲಿ ಇದನ್ನು ಮಂಡಿಸುತ್ತೇವೆಂದು ಹೇಳಿದ್ದಾರೆ