ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜಸ್ಥಾನದ ಝಾಲಾವರ್ ಜಿಲ್ಲೆಯ ಪಿಪ್ಲೋಡಿ ಗ್ರಾಮದಲ್ಲಿ ಭೀಕರ ದುರಂತ ಸಂಭವಿಸಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಮಕ್ಕಳು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಹಲವಾರು ಮಕ್ಕಳು ಇನ್ನೂ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ.
ಪೊಲೀಸರು ಮತ್ತು ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ಹೊರತೆಗೆದು ಆಸ್ಪತ್ರೆಗಳಿಗೆ ರವಾನಿಸಲು ಸಹಕಾರ ನೀಡುತ್ತಿದ್ದಾರೆ. 40ಕ್ಕೂ ಹೆಚ್ಚು ಮಕ್ಕಳು ಕಟ್ಟಡದ ಒಳಗೆ ಇದ್ದು, ಅವರು ಅವಶೇಷಗಳಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ತೀವ್ರತೆ ಗುರುತಿಸಿದ ಎನ್‌ಡಿಆರ್‌ಎಫ್ ತಂಡಗಳು ಕೂಡ ಸ್ಥಳಕ್ಕೆ ಆಗಮಿಸಿ ರೆಸ್ಕ್ಯೂ ಕಾರ್ಯದಲ್ಲಿ ತೊಡಗಿವೆ.
ಘಟನೆಯ ಕುರಿತು ಮಾಹಿತಿ ನೀಡಿದ ಝಾಲಾವರ್ ಎಸ್‌ಪಿ ಅಮಿತ್ ಕುಮಾರ್, “ಗಾಯಗೊಂಡ ಮಕ್ಕಳನ್ನು ಝಾಲಾವರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇವರಲ್ಲಿ ಮೂರರಿಂದ ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿದೆ” ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ತುರ್ತಾಗಿ ಸಭೆ ನಡೆಸಿ ಈ ದುರಂತಕ್ಕೆ ಕಾರಣವಾದ ನಿರ್ಲಕ್ಷ್ಯವನ್ನು ಪರಿಶೀಲಿಸಲು ಕ್ರಮ ಆರಂಭಿಸಿದೆ. ಶಾಲಾ ಕಟ್ಟಡದ ಸ್ಥಿತಿಗತಿಯ ಬಗ್ಗೆ ಈಗ ಪ್ರಶ್ನೆಗಳು ಉಂಟಾಗುತ್ತಿದ್ದು, ಶೀಘ್ರದಲ್ಲೇ ತನಿಖೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.