ಹೊಸ ದಿಗಂತ ವರದಿ, ಹುಬ್ಬಳ್ಳಿ:
ಸಮಾಜದಲ್ಲಿ ಎಲ್ಲಿಯವರೆಗೂ ಸುಶಿಕ್ಷಿತರು ಇರಲ್ಲವೋ ಅಲ್ಲಿಯವರೆಗೂ ಬದುಕಿನಲ್ಲಿ ಸಂತೋಷವಾಗಿ ಇರಲು ಸಾಧ್ಯವಿಲ್ಲ. ಮನುಷ್ಯನಿಗೆ ಜ್ಞಾನ ಬಹಳ ಮುಖ್ಯ. ಜ್ಞಾನವಿದ್ದವರು ಜಗತ್ತನ್ನು ಆಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ತಾಲೂಕಿನ ಛಬ್ಬಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಪ್ರೌಢ ಶಾಲೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಯಾವುದೇ ಅಭಿವೃದ್ಧಿ ಕೆಲಸವಾಗಿರಲಿ ಸರ್ಕಾರಕ್ಕೆ ಸ್ಪಷ್ಟತೆ ಅವಶ್ಯಕ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ 9 ಸಾವಿರ ಶಾಲಾ ಕೊಠಡಿ ಮಂಜೂರು ಮಾಡಿದ್ದೆ. ಅಷ್ಟೇ ಅಲ್ಲದೆ ವಿವೇಕ ಯೋಜನೆ ಆರಂಭಿಸಿ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ಕೊಠಡಿ ನಿರ್ಮಾಣ ಮಾಡಲಾಗಿದೆ. ಅಪಾರವಾದ ಜ್ಞಾನ ಹೊಂದಿರುವ ವಿವೇಕಾನಂದರಂತೆ ಮಕ್ಕಳು ಅಂತಹ ಪರಿಸರದಲ್ಲಿ ಕಲಿಯಬೇಕು ಎಂಬುವುದು ಯೋಜನೆ ಉದ್ದೇಶ ಎಂದು ತಿಳಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಶಿಕ್ಷಣ ಸಚಿವರಾದಾಗ 1 ಸಾವಿರ ಪ್ರೌಢ ಶಾಲೆಗಳಿಗೆ ಮಂಜೂರಾತಿ ಮಾಡಿದ್ದರು. ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ನಾನು ಸಹ ಯಾವ ಗ್ರಾಮದಲ್ಲಿ ಶಾಲೆಗಳಿಲ್ಲ ಅಲ್ಲಿ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಅತೀ ಹೆಚ್ಚು ಹಣ ಮೀಸಲಿಟ್ಟಿದ್ದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಗೆ ಕಾರಣವಾಯಿತು.
ಈಗಿರುವ ಕಾಂಗ್ರೆಸ್ ಸರ್ಕಾರವೂ ಹೆಚ್ಚು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಬೇಕು. ವಿದ್ಯಾರ್ಥಿಗಳು ಸಹ ತಮ್ಮ ಕನಸ್ಸು ನನಸು ಮಾಡಿಕೊಳ್ಳಬೇಕು. ಅಸಾಧ್ಯ ಎನ್ನುವುದು ಯಾವುದಿಲ್ಲ. ಪ್ರಶ್ನೆ ಮಾಡುವುದು ಜ್ಞಾನದ ಬೆಳಕಾಗಿದೆ. ಪ್ರಶ್ನೆ ಮಾಡುವ ಗುಣ ಬೆಳೆಸಿಕೊಂಡಾಗ ಮಾತ್ರ ಜ್ಞಾನವಂತರಾಗಲು ಸಾಧ್ಯ ಎಂದರು.
ಶಾಲಾ ನಿರ್ಮಾಣ ಮಾಡುತ್ತಿರುವುದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ. ಸಮಯ ವ್ಯರ್ಥ ಮಾಡುವ ಬದಲು ಚೆನ್ನಾಗಿ ಅಧ್ಯಯನ ಮಾಡಿ ಸಮಾಜದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.
ಸಮಾರಂಭಕ್ಕೂ ಮುಂಚೆ ಗ್ರಾಮದ ಪ್ರೌಢ ಶಾಲೆಯ ನೂತನ ಕಟ್ಟದ ಭೂಮಿ ಪೂಜೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಟ ರಿಷಬ್ ಶೆಟ್ಟಿ ನೆರವೇರಿಸಿದರು.
ರಾಮಕೃಷ್ಣ ಆಶ್ರಮದ ರವೀಂದ್ರಾನಂದ ಸ್ವಾಮೀಜಿ, ಕುಂದಗೋಳ ಶಾಸಕ ಎಂ.ಆರ್.ಪಾಟೀಲ, ಪತ್ರಕರ್ತ ಅಜೀತ್ ಹನ್ಮಕ್ಕನವರ ಸೇರಿದಂತೆ ಅನೇಕರಿದ್ದರು.