ಹೊಸದಿಗಂತ ವರದಿ, ಅಂಕೋಲಾ:
ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ಕೊಠಡಿಯ ಮೇಲ್ಛಾವಣಿಯ ತಳಬಾಗದ ಕಾಂಕ್ರೀಟ್ ಪದರು ಕುಸಿದು ಬಿದ್ದು 3 ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.
ಸುಹಾನಿ, ಸಪನ್, ಸಾಧ್ವೀನ್ ಎಂಬ ವಿದ್ಯಾರ್ಥಿಗಳು ಗಾಯಗೊಂಡವರಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದ್ಯಾಹ್ನ 12.30ರ ಸಮಯಕ್ಕೆ ಊಟದ ವಿರಾಮ ಇದ್ದ ಸಮಯದಲ್ಲಿ 3 ವಿದ್ಯಾರ್ಥಿಗಳು ತರಗತಿ ಒಳಗಡೆ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು ಮೇಲ್ಛಾವಣಿಯ ತಳಬಾಗದ ಕಾಂಕ್ರೀಟ್ ಪದರು ಕುಸಿದು ಕೆಳಗೆ ಬಿದ್ದು ವಿದ್ಯಾರ್ಥಿಗಳು ಕುಳಿತುಕೊಳ್ಳುವ ಡೆಸ್ಕ್ ಸೇರಿದಂತೆ ತರಗತಿ ಒಳಗಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ತರಗತಿಯಲ್ಲಿ 66 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು
ಬಹುಪಾಲು ವಿದ್ಯಾರ್ಥಿಗಳು ತರಗತಿಯ ಹೊರಗೆ ಇದ್ದ ಕಾರಣ ಹೆಚ್ಚಿನ ಅನಾಹುತ ಆಗುವುದು ತಪ್ಪಿದಂತಾಗಿದೆ.
ಘಟನೆ ಕುರಿತಂತೆ ಹಲವಾರು ಜನ ವಿದ್ಯಾರ್ಥಿಗಳ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದು ಶಾಲೆಯ ಬಹುತೇಕ ಎಲ್ಲಾ ಕೊಠಡಿಗಳ ಮೇಲ್ಛಾವಣಿ ಭಾಗ ಕುಸಿಯುವ ಸ್ಥಿತಿಯಲ್ಲಿ ಇದೆ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಆದರೆ ಹೊಣೆ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಕೋಲಾ ಪೋಲಿಸರು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.