ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಸೋರ್ ರೈಲು ಅಪಘಾತ ಸಂಭವಿಸಿ ಒಂದು ವಾರ ಕಳೆದರೂ ಜನರು ಇನ್ನೂ ಭಯಭೀತರಾಗಿದ್ದಾರೆ. ದುರಂತವು ಎಷ್ಟು ಕೆಟ್ಟದಾಗಿದೆ ಎಂದರೆ ಎಲ್ಲಿ ನೋಡಿದರೂ ಮೃತ ದೇಹಗಳು ರಾಶಿ ಬಿದ್ದವು. ಮೃತ ದೇಹಗಳನ್ನು ಇಡಲು ಬೇರೆ ಬೇರೆ ಸ್ಥಳಗಳನ್ನು ಹುಡುಕಬೇಕಾದ ಪರಿಸ್ಥಿತಿ ಇತ್ತು. ಶವಗಳನ್ನು ಸಂಗ್ರಹಿಸಲು ಹತ್ತಿರದ ಸರ್ಕಾರಿ ಕಟ್ಟಡಗಳನ್ನು ಸಹ ಬಳಸಲಾಗುತ್ತಿತ್ತು. ಈ ಕಟ್ಟಡಗಳಲ್ಲಿ ಒಂದು 65 ವರ್ಷ ಹಳೆಯ ಶಾಲೆಯಾಗಿದ್ದು, ಬಾಲಸೋರ್ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಶವಗಳನ್ನು ಇರಿಸಲಾಗಿತ್ತು.
ಇದೇ ವೇಳೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಹಾಗೂ ಶಿಕ್ಷಕರು ಈ ಬಗ್ಗೆ ಗಲಾಟೆ ಎಬ್ಬಿಸಿದರು. ರೈಲು ಅಪಘಾತವಾದ ಸ್ಥಳದಿಂದ ಶಾಲೆಯು ಕೇವಲ 500 ಮೀಟರ್ ದೂರದಲ್ಲಿದೆ. ಬೇಸಿಗೆ ರಜೆಗಾಗಿ ಶಾಲೆ ಮುಚ್ಚಲಾಗಿತ್ತು. ಜೂನ್ 2ರಂದು ಸಂಭವಿಸಿದ ರೈಲು ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆ ವೇಳೆ ರೈಲಿನಿಂದ ಮೃತದೇಹಗಳನ್ನು ಹೊರತೆಗೆಯಲು ಸ್ವಲ್ಪ ಜಾಗದ ಅಗತ್ಯವಿತ್ತು. ಇಂತಹ ಪರಿಸ್ಥಿತಿಯಲ್ಲಿ ಬಹನಾಗ ನೋಡಲ್ ಪ್ರೌಢಶಾಲೆಯನ್ನು ಇದಕ್ಕಾಗಿ ಬಳಸಿಕೊಳ್ಳಲಾಯಿತು.
6 ತರಗತಿ ಕೊಠಡಿಗಳಲ್ಲಿ 250 ಮೃತ ದೇಹಗಳು
ರಜೆ ಮುಗಿದು ಜೂನ್ 16ರಿಂದ ಶಾಲೆಗಳು ತೆರೆಯಲಿದ್ದು, ಮಕ್ಕಳು ಮತ್ತು ಶಿಕ್ಷಕರು ಶಾಲೆಗೆ ಬರಲು ನಿರಾಕರಿಸಿದ್ದಾರೆ. ಮೃತದೇಹಗಳನ್ನು ಈ ಶಾಲೆಯಲ್ಲಿ ಇಟ್ಟಿದ್ದರಿಂದ ನಾವು ಬರುವುದಿಲ್ಲ ಎಂದು ಖಾಡಾಖಂಡಿತವಾಗಿ ಹೇಳಿದ್ದಾರೆ. ಇದಕ್ಕಾಗಿ 6 ತರಗತಿ ಕೊಠಡಿಗಳು ಮತ್ತು ಸಭಾಂಗಣವನ್ನು ಬಳಸಲಾಗಿದೆ. ನಂತರ, ಮೃತ ದೇಹಗಳನ್ನು ಇಲ್ಲಿಂದ ಬಾಲಸೋರ್ ಮತ್ತು ಭುವನೇಶ್ವರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು.
ಮೃತ ದೇಹಗಳನ್ನು ಹೊರತೆಗೆದ ನಂತರ, ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಆದರೂ ಮಕ್ಕಳು ಮತ್ತು ಶಿಕ್ಷಕರು ಶಾಲೆಯೊಳಗೆ ಹೋಗಲು ಹೆದರುತ್ತಿದ್ದಾರೆ. ಮೃತದೇಹಗಳನ್ನು ಶಾಲೆಯೊಳಗೆ ಇಡುವುದರಿಂದ ಆ ಪ್ರದೇಶ ದೆವ್ವವಾಗಿ ಕಾಡುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ಭಯವನ್ನು ಹೊರಹಾಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಲಾ ಕಟ್ಟಡ ಕೆಡವಿ ಹೊಸದನ್ನು ನಿರ್ಮಿಸುವ ಸಾಧ್ಯತೆ ಇದೆ ಎಂಬ ಚರ್ಚೆಯೂ ನಡೆಯುತ್ತಿದೆ. ಬಾಲಸೋರ್‌ನ ಜಿಲ್ಲಾಧಿಕಾರಿ ಜನರು ಭಯ ಮತ್ತು ಮೂಢನಂಬಿಕೆ ಹರಡದಂತೆ ಪರಿಪರಿಯಾಗಿ ತಿಳಿಸಿಕೊಟ್ಟರೂ ಪ್ರಯೋಜನವಾಗಿಲ್ಲ. ಇದೇ ವೇಳೆ ಶಾಲಾ ಕಟ್ಟಡ ಕೆಡವಬೇಕೋ ಬೇಡವೋ ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.