ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಪಠ್ಯಕ್ರಮವನ್ನು ಅನುಸರಿಸುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2024-25ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಇಂದಿನಿಂದ ಆರಂಭವಾಗಲಿದ್ದು, ಶಾಲಾ ಪುನರಾರಂಭದ ದಿನದಂದು ಮಕ್ಕಳಿಗೆ ಸಿಹಿಊಟ ಬಡಿಸಲಾಗುವುದು.
ಶಾಲಾ ಮಕ್ಕಳಿಗೆ ಮೊದಲ ದಿನವೇ ಪಠ್ಯಪುಸ್ತಕ, ಸಮವಸ್ತ್ರಗಳನ್ನು ವಿತರಿಸಲಾಗುತ್ತದೆ. ಈ ಬಾರಿ ಒಂದೇ ಬಾರಿ ಎರಡು ಜೊತೆ ಸಮವಸ್ತ್ರ ನೀಡಲಾಗುತ್ತದೆ. ಜೊತೆಗೆ ಮಕ್ಕಳಿಗೆ ಮೊದಲ ದಿನದ ಖುಷಿಗಾಗಿ ಸಿಹಿ ಅಡಿಗೆ ಮಾಡಲಾಗುತ್ತದೆ. ಕೇಸರಿಬಾತ್, ಹೆಸರುಬೇಳೆ ಪಾಯಸ ಅಥವಾ ಇನ್ಯಾವುದಾದರೂ ಸಿಹಿತಿಂಡಿ ನೀಡಲಾಗುತ್ತದೆ.
ಮುಖ್ಯ ಶಿಕ್ಷಕರು, ಕೆಲ ಸಹ ಶಿಕ್ಷಕರು ಶಾಲೆ ಆರಂಭಕ್ಕೂ ಎರಡು ದಿನ ಮುನ್ನವೇ ಎಲ್ಲ ತಯಾರಿ ನಡೆಸಿ ಶಾಲೆಯನ್ನು ಕ್ಲೀನ್ ಮಾಡಿಸಿದ್ದಾರೆ. ಮಾವಿನ ತೋರಣ, ರಂಗೋಲಿ ಹಾಗೂ ಬಾಳೆದಿಂಡನ್ನು ಕಟ್ಟಲಾಗಿದೆ.