ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಈಗಾಗಲೇ ಅಗತ್ಯ ದಿನ ಬಳಕೆಯ ವಸ್ತುಗಳಾದ ಹಾಲು, ಗ್ಯಾಸ್, ಪೆಟ್ರೋಲ್, ಡಿಸೇಲ್ ಸೇರಿದಂತೆ ವಿವಿಧ ಸರಕು ಮತ್ತು ಸೇವೆಗಳ ದರ ಏರಿಕೆ ಮಾಡಲಾಗಿದೆ. ಇದೇ ಲಿಸ್ಟ್‌ಗೆ ಇದೀಗ ಸ್ಕೂಲ್ಸ್ ಕೂಡ ಸೇರಿಕೊಂಡಿದೆ.
ಈ ಬೆಲೆ ಏರಿಕೆಯಿಂದ ಕಂಗಲಾಗಿರುವ ಜನರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿರುವ ಪೋಷಕರಿಗೆ ಏಕಾಏಕಿ ಸಾವಿರಾರು ರೂ. ಶುಲ್ಕ ಹೆಚ್ಚಳ ಮಾಡಲಾಗಿದ್ದು, ಕೆಲ ಖಾಸಗಿ ಶಾಲೆಗಳ ವಿರುದ್ದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಖಾಸಗಿ ಶಾಲೆಯಲ್ಲಿ ಏಕಾಏಕಿ ಶುಲ್ಕ ಹೆಚ್ಚಳದಿಂದ ಆಕ್ರೋಶಗೊಂಡ ಪೋಷಕರು ಬೆಂಗಳೂರು ಉತ್ತರ ತಾಲೂಕಿನ ಹೊಸಹಳ್ಳಿ ಗ್ರಾಮದ ಎಂವಿಎಂ ಶಾಲೆಗೆ ಮುತ್ತಿಗೆ ಹಾಕಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿರುವಂತಹ ಘಟನೆ ನಡೆದಿದೆ. ಅಂದಹಾಗೆ ಎಂವಿಎಂ ಶಾಲೆಯಲ್ಲಿ ಸುಮಾರು 850 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಭಾರಿಗಿಂತ ಈ ಭಾರಿ ಶಾಲೆಯ ಫೀಸ್ ಹೆಚ್ಚಳ ಮಾಡಿದ್ದಾರಂತೆ.
ಅಂದಹಾಗೆ ಎಲ್ಕೆಜಿಗೆ ಈ ಹಿಂದೆ 75 ಸಾವಿರ ರೂ. ತೆಗೆದುಕೊಂಡಿದ್ದ ಶಾಲಾ ಆಡಳಿತ ಮಂಡಳಿ ಮುಂದಿನ ಭಾರಿ ಶುಲ್ಕ ಹೆಚ್ಚಳವಾಗಲ್ಲ ಅಂತ ಹೇಳಿದ್ರಂತೆ. ಆದರೆ ಈ ಭಾರಿ ಮಕ್ಕಳ ಶಾಲಾ ಶುಲ್ಕವನ್ನ 20 ಸಾವಿರ ರೂ. ಹೆಚ್ಚಳ ಮಾಡಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.