ಹೊಸದಿಗಂತ , ಚಿತ್ರದುರ್ಗ:
ಜಗತ್ತು ಬದಲಾವಣೆಗೆ ತೆರೆದುಕೊಳ್ಳುತ್ತಿರುವುದರಿಂದ ಪ್ರೌಢಶಾಲೆ ಮಕ್ಕಳಲ್ಲಿ ವೈಜ್ಞಾನಿಕ ವಿಷಯಗಳನ್ನು ಬಿತ್ತುವುದು ಅತ್ಯಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.
ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ ಹಾಗೂ ಕೆನ್ನಮೆಟಲ್ ಇಂಡಿಯಾ ಲಿ. ಬೆಂಗಳೂರು ಇವರುಗಳ ಸಹಯೋಗದೊಂದಿಗೆ ತಾಲ್ಲೂಕಿನ 80 ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಿಗೆ ಡಯಟ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ಕಿಟ್ ವಿತರಣೆ ಹಾಗೂ ವಿಜ್ಞಾನ ಶಿಕ್ಷಕರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ನಿಂತ ನೀರಲ್ಲ, ಸರಾಗ, ರಭಸವಾಗಿ ಹರಿಯುತ್ತಿದೆ. ಬೋಧನೆ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ಕಷ್ಟವಾಗುತ್ತದೆ. ಹಾಗಾಗಿ ಪ್ರಯೋಗದ ಮೂಲಕ ಮಕ್ಕಳ ಮನಸ್ಸಿಗೆ ಸುಲಭವಾಗಿ ನಾಟಲು ಸಹಕಾರಿಯಾಗಲಿದೆ. ವಿಜ್ಞಾನವೆಂದರೆ ಪ್ರಯೋಗ. ಬಳಕೆ ಮಾಡುವುದು ಹೇಗೆ ಎನ್ನುವ ಕುರಿತು ಶಿಕ್ಷಕರುಗಳು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು. ತಂತ್ರಜ್ಞಾನದ ಪ್ರಭಾವ ಮಕ್ಕಳು, ಸಮಾಜದ ಮೇಲೆ ಬೀರುತ್ತಿರುವುದರಿಂದ ಐದರಿಂದ ಹತ್ತನೆ ತರಗತಿ ಮಕ್ಕಳಿಗೆ ವಿಜ್ಞಾನದ ಅರಿವು ಮೂಡಿಸುವುದು ಮುಖ್ಯ ಎಂದು ತಿಳಿಸಿದರು.
ವಿಜ್ಞಾನ ಕಿಟ್‌ನಲ್ಲಿರುವ ಎಲ್ಲಾ ಅಂಶಗಳು ಮಕ್ಕಳಿಗೆ ಪ್ರಯೋಜನವಾಗಬೇಕು. ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಪರಿಸ್ಥಿತಿ ಶೋಚನೀಯವಾಗಿದೆ. ವಿಜ್ಞಾನದ ವಿಷಯ ಕುರಿತು ಮಕ್ಕಳಿಗೆ ಪರಿಚಯಾತ್ಮಕವಾಗಿ ಬೋಧಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ. ಹಾಗಾಗಿ ವಿಜ್ಞಾನ ಕಿಟ್‌ನ್ನು ಜೋಪಾನವಾಗಿ ಸಂಗ್ರಹಿಸಿ ಕಲಿಕಾ ವರ್ಷಗಳಲ್ಲಿ ಮಕ್ಕಳಿಗೆ ಪೂರಕವಾಗುವಂತೆ ಬಳಸಬೇಕೆಂದು ವಿಜ್ಞಾನ ಶಿಕ್ಷಕರುಗಳಿಗೆ ಎಸ್.ನಾಗಭೂಷಣ್ ಕರೆ ನೀಡಿದರು.
ಜಿಲ್ಲೆಯಲ್ಲಿ 317 ಪ್ರೌಢಶಾಲೆಗಳಲ್ಲಿನ ಮಕ್ಕಳಿಗೆ ಪ್ರಯೋಗದ ಮೂಲಕ ವಿಜ್ಞಾನದ ಮಹತ್ವ ತಿಳಿಸಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು.