ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಡೆಯುವ ಶಾಂಘೈ ಸಹಕಾರ ಒಕ್ಕೂಟ (SCO) ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರಂಭಗೊಳ್ಳಲಿರುವ ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಎಲ್ಲಾ ಎಂಟು ದೇಶಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಇರಾನ್ ಅನ್ನು ಸೇರ್ಪಡೆ ಮಾಡಲಾಗುತ್ತಿದೆ.
ಭಾರತ ಮೊದಲ ಬಾರಿಗೆ ಎಸ್ಸಿಒ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಎಸ್ಸಿಒ ಶೃಂಗಸಭೆಯಲ್ಲಿ ಇರಾನ್ ಅನ್ನು ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡಿಸಲಾಗುತ್ತಿದೆ. ಈ ಒಕ್ಕೂಟದಲ್ಲಿ ಬೆಲಾರಸ್ ಸೇರ್ಪಡೆಗೆ ರಷ್ಯಾ ಬಲವಾಗಿ ಬೆಂಬಲ ನೀಡಿದೆ. ಇದಲ್ಲದೇ ಅಫ್ಘಾನಿಸ್ತಾನ ಮತ್ತು ಮಂಗೋಲಿಯಾ ದೇಶಗಳು ಕೂಡ ಎಸ್ಸಿಒಗೆ ಸೇರಲು ಬಯಸುತ್ತಿವೆ. ಆದರೆ ಬೆಲಾರಸ್ ಮತ್ತು ಮಂಗೋಲಿಯಾವನ್ನು ವೀಕ್ಷಕ ರಾಜ್ಯಗಳಾಗಿ ಆಹ್ವಾನಿಸಲಾಗಿದೆ. ಅಲ್ಲದೆ ತುರ್ಕಮೆನಿಸ್ತಾನವನ್ನು ಸಹ ಅತಿಥಿಯಾಗಿ ಆಹ್ವಾನಿಸಲಾಗಿದೆ.
ಈ ಬಾರಿಯ ಥೀಮ್ ಅನ್ನು 2018ರ SCO ಕಿಂಗ್ಡಾವೋ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದ ಸಂಕ್ಷಿಪ್ತ ರೂಪವಾಗಿದ್ದು, S: ಭದ್ರತೆ, E: ಆರ್ಥಿಕ ಅಭಿವೃದ್ಧಿ, C: ಸಂಪರ್ಕ, U: ಏಕತೆ, R: ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ, E: ಪರಿಸರ ರಕ್ಷಣೆ ಎಂಬುದಾಗಿದೆ.