ಹೊಸದಿಗಂತ ವರದಿ ಉಳ್ಳಾಲ :
ಸ್ಕಿಡ್ ಆಗಿ ನಿಯಂತ್ರಣ ತಪ್ಪಿದ ಸ್ಕೂಟರೊಂದು ರಸ್ತೆ ಬದಿಯ ಮನೆಯ ಆವರಣ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆ ಎಂಬಲ್ಲಿ ನಡೆದಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮೀ ಮಂದಿರ ಬಳಿಯ ನಿವಾಸಿ ರಾಘವೇಂದ್ರ ಸಾಲ್ಯಾನ್ (44)ಯಾನೆ ರಘು ಮೃತ ದುರ್ದೈವಿ.
ಖಾಸಗಿ ಕಂಪನಿಯೊಂದರಲ್ಲಿ ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದ ರಾಘವೇಂದ್ರ ಅವರು ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಂಬಿಕಾ ರಸ್ತೆಯ ನಿರ್ಮಲಾ ಟ್ರಾವೆಲ್ಸ್ ಗ್ಯಾರೇಜ್ ಬಳಿ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ ರಾಘವೇಂದ್ರ ಅವರ ತಲೆಯು ರಸ್ತೆ ಬದಿಯ ಆವರಣ ಗೋಡೆಗೆ ಬಡಿದ ಪರಿಣಾಮ ಸ್ಥಳದಲ್ಲಿ ರಕ್ತದೋಕುಳಿಯೇ ಹರಿದಿದೆ.
ಅಂಬುಲೆನ್ಸ್ ತುರ್ತು ವಾಹನವು ಸ್ಥಳಕ್ಕೆ ಬರಲು ತಡವರಿಸಿದ ಕಾರಣ ಸ್ಥಳೀಯ ಯುವಕರು ಆಟೋ ರಿಕ್ಷಾದಲ್ಲಿ ಗಾಯಾಳು ರಾಘವೇಂದ್ರ ಅವರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯದಲ್ಲೇ ಅವರು ಉಸಿರು ಚೆಲ್ಲಿದ್ದರೆನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತ ರಾಘವೇಂದ್ರ ಅವರು ತಾಯಿ,ಪತ್ನಿ ಮತ್ತು ಏಕೈಕ ಗಂಡು ಮಗುವನ್ನ ಅಗಲಿದ್ದಾರೆ.