ದ್ವಿತೀಯ ಪಿಯು ಪರೀಕ್ಷೆ-2 ಫಲಿತಾಂಶ ಪ್ರಕಟ: ರಿಸಲ್ಟ್‌ ಹೀಗೆ ಚೆಕ್‌ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದ್ವಿತೀಯ ಪಿಯು ಪರೀಕ್ಷೆ-2 ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು https://karresults.nic.in/ ಜಾಲತಾಣಕ್ಕೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಏ.24ರಿಂದ ಮೇ 08ರವರೆಗೆ ಒಟ್ಟು 332 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಈ ಪರೀಕ್ಷೆಗೆ 1,94,077 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. 1,53,620 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 60,692 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ನೇ ಪರೀಕ್ಷೆಗೆ 6,88,678 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಪರೀಕ್ಷೆ-1ರಲ್ಲಿ 4,76,256 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೇ, ಪರೀಕ್ಷೆ-2ರಲ್ಲಿ 60,692 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳ್ಳದ ವಿದ್ಯಾರ್ಥಿಗಳಿಗೆ 3ನೇ ಪರೀಕ್ಷೆಯನ್ನು ಜೂನ್ 09ರಿಂದ 20ರವರೆಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆ-1ರಲ್ಲಿ ಅನುತ್ತೀರ್ಣರಾಗಿದ್ದ 1.70 ಲಕ್ಷ ವಿದ್ಯಾರ್ಥಿಗಳಲ್ಲಿ 1.57 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡಿದ್ದರು. ಪರೀಕ್ಷಾ ಶುಲ್ಕ ಇಲ್ಲದೇ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದ್ದರಿಂದ ಶೇ 92.4ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು.

ಏ.24 ರಿಂದ ಮೇ 8ರವರೆಗೆ ಪರೀಕ್ಷೆ-2 ನಡೆದಿತ್ತು. ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ಸಿಇಟಿ ಪರೀಕ್ಷೆಯ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸಿಇಟಿ ಫಲಿತಾಂಶಕ್ಕೂ ಮೊದಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಬಿಡುಗಡೆ ಮಾಡಿದೆ.

ದ್ವಿತೀಯ ಪಿಯು ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಬೇಕು.
ಹೋಂ ಪೇಜ್​ನಲ್ಲಿ, Second PU Results 2025 ಲಿಂಕ್ ಅನ್ನು ಕ್ಲಿಕ್ ಮಾಡಿ.
ರಿಜಿಸ್ಟ್ರೇಷನ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಪಾಸ್‌ವರ್ಡ್ ಆಯ್ಕೆಮಾಡಿ.
Second PU Results 2025 ಎಂಬುದು ಸ್ಕ್ರೀನ್​ನಲ್ಲಿ ಕಾಣಿಸುತ್ತದೆ.
ಈಗ ನೀವು ರಿಸಲ್ಟ್ ನೋಡಬಹುದು. ಅಲ್ಲಿಯೇ ಪಿಡಿಎಫ್ ಡೌನ್​ಲೋಡ್ ಮಾಡಲು ಅವಕಾಶ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!