ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಈಗ ‘ಪ್ರವಾಸ’ ಮತ್ತು ‘ವಾಸ್ತವ್ಯ’ದ ರಾಜಕೀಯದ ಸದ್ದು ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಕುರ್ಚಿ ಕದನ ತಾರಕಕ್ಕೇರುತ್ತಿರುವ ಸುಳಿವು ಸಿಕ್ಕಿದ್ದು, ಶಾಸಕರ ಗುಂಪುಗಾರಿಕೆ ಈಗ ಆಸ್ಟ್ರೇಲಿಯಾದಿಂದ ಹಿಡಿದು ಸ್ಥಳೀಯ ರೆಸಾರ್ಟ್‌ಗಳವರೆಗೆ ಹಬ್ಬುವ ಸಾಧ್ಯತೆ ಇದೆ.
ಒಟ್ಟು 35 ಶಾಸಕರು ಫೆಬ್ರವರಿ 16 ರಿಂದ ಮಾರ್ಚ್ 3 ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಮೇಲ್ನೋಟಕ್ಕೆ ಇದು ಪ್ರವಾಸೋದ್ಯಮದಂತೆ ಕಂಡರೂ, ಇದರ ಹಿಂದೆ ಶಾಸಕರನ್ನು ಒಗ್ಗೂಡಿಸಿಡುವ ಹಾಗೂ ವಿಶ್ವಾಸ ಗಟ್ಟಿಗೊಳಿಸಿಕೊಳ್ಳುವ ತಂತ್ರಗಾರಿಕೆ ಅಡಗಿದೆ ಎನ್ನಲಾಗುತ್ತಿದೆ. ಈ ಪ್ರವಾಸದ ವಿವರಗಳನ್ನು ನಾಯಕರು ರಹಸ್ಯವಾಗಿಟ್ಟಿರುವುದು ರಾಜಕೀಯ ಕುತೂಹಲವನ್ನು ದುಪ್ಪಟ್ಟು ಮಾಡಿದೆ.
ವಿದೇಶಿ ಪ್ರವಾಸಕ್ಕೆ ಪ್ರತಿಯಾಗಿ, ಮತ್ತೊಂದು ಪ್ರಭಾವಿ ಬಣ ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದೆ ಎಂಬ ಸುದ್ದಿಗಳು ದಟ್ಟವಾಗಿವೆ. ತಮ್ಮ ಶಕ್ತಿ ಪ್ರದರ್ಶನ ಮಾಡಲು ಹಾಗೂ ಮುಂದಿನ ರಾಜಕೀಯ ನಡೆಗಳ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆಗಳನ್ನು ಆಯೋಜಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಯಿಂದ ಮರಳಿದ ಬಳಿಕ ಈ ಬೆಳವಣಿಗೆಗಳು ಅಧಿಕೃತ ರೂಪ ಪಡೆಯಲಿವೆ. ದೆಹಲಿ ಮಟ್ಟದ ಮಾತುಕತೆಗಳ ನಂತರ, ರಾಜ್ಯದ ಶಾಸಕರ ನಡುವಿನ ಈ ‘ಶಕ್ತಿ ಪ್ರದರ್ಶನ’ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಈಗ ಎಲ್ಲರ ಕುತೂಹಲದ ಕೇಂದ್ರಬಿಂದು.



