ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ ಆತಂಕಕಾರಿ ಬೆಳವಣಿಗೆಗಳು ವರದಿಯಾಗಿವೆ. ಬಾರಾಮುಲ್ಲಾ ಜಿಲ್ಲೆಯ ಟಾಂಗ್ಮಾರ್ಗ್ನ ಬದರ್ಕೂಟ್ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಎರಡು ಹ್ಯಾಂಡ್ ಗ್ರೆನೇಡ್ಗಳನ್ನು ವಶಪಡಿಸಿಕೊಂಡಿವೆ.
ಅರಣ್ಯದಲ್ಲಿ ಗ್ರೆನೇಡ್ ಪತ್ತೆ
ಬದರ್ಕೂಟ್ ನಿವಾಸಿ ಗುಲಾಮ್ ಜೀಲಾನಿ ರೇಶಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾರಾಮುಲ್ಲಾ ಪೊಲೀಸರು, ಬಿಎಸ್ಎಫ್ನ ಸಿಐಸಿಟಿ ಘಟಕ, 2RR ಹಾಗೂ ಸಿಆರ್ಪಿಎಫ್ 176ನೇ ಬೆಟಾಲಿಯನ್ ಸಿಬ್ಬಂದಿ ಜಂಟಿಯಾಗಿ ಪ್ರದೇಶ ಪರಿಶೀಲನಾ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಬೆಳವಣಿಗೆ ನಡೆದಿದೆ.
ಆರೋಪಿತನ ಬಳಿಯಿಂದ ಮೊದಲು ಒಂದು ಕೈಗ್ರೆನೇಡ್ ಪತ್ತೆಯಾಗಿದೆ. ಬಳಿಕ ಆತ ನೀಡಿದ ಮಾಹಿತಿ ಆಧರಿಸಿ ಅರಣ್ಯದಲ್ಲಿ ಅಡಗಿಸಿಡಲಾಗಿದ್ದ ಮತ್ತೊಂದು ಗ್ರೆನೇಡ್ ಅನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಟಾಂಗ್ಮಾರ್ಗ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸ್ಫೋಟಕಗಳ ಮೂಲ, ಅವುಗಳ ಬಳಕೆಯ ಉದ್ದೇಶ ಹಾಗೂ ಇತರ ಸಂಪರ್ಕಗಳ ಕುರಿತು ತನಿಖೆ ಮುಂದುವರಿದಿದೆ.



