ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾಕುಂಭ ಮೇಳದ ಕುರಿತು ಅವಹೇಳನಕಾರಿಯಾದ ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಭೇಟಿ ನೀಡುತ್ತಿದ್ದಾರೆ.
ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದರಾದ ಅಭಿಷೇಕ್ ಸಿಂಘ್ವಿ ಅವರು, ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು, ರಾಮಲಲಾ ದರುಶನವನ್ನು ‘ದೈವಿಕ ಭಾಗ್ಯ’ ಎಂದು ಬಣ್ಣಿಸಿದ್ದಾರೆ.
ರಾಮಲಾಲಾ ದರುಶನ ಪಡೆದು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, ಅಭಿಷೇಕ್ ಮನು ಸಿಂಘ್ವಿ ಅವರು ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ “ಅಯೋಧ್ಯೆಯಲ್ಲಿ ರಾಮಲಲಾದ ದೈವಿಕ ದರುಶನ ಮತ್ತು ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ, ನಂಬಿಕೆ ಮತ್ತು ಭಕ್ತಿಯಿಂದ ತುಂಬಿದ ಹೃದಯದೊಂದಿಗೆ ದೆಹಲಿಗೆ ಹಿಂತಿರುಗುತ್ತಿದ್ದೇವೆ. ಈ ಕಾಲಾತೀತ ತೀರ್ಥಯಾತ್ರೆಗಳು ಭಾರತದ ಆತ್ಮವು ಅದರ ಏಕತೆ, ಆಧ್ಯಾತ್ಮಿಕತೆ ಮತ್ತು ಶ್ರೀಮಂತ ಸಂಪ್ರದಾಯಗಳಲ್ಲಿದೆ ಎಂಬುದನ್ನು ನಮಗೆ ನೆನಪಿಸುತ್ತವೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮತ್ತೊಂದು ಪೋಸ್ಟ್‌ನಲ್ಲಿ ಅವರು, “ಪವಿತ್ರ ಭೂಮಿಯಾದ ಅಯೋಧ್ಯೆಯಲ್ಲಿ ನಡೆದಾಡುತ್ತಿದ್ದಾಗ, ನನಗೆ ಶಾಂತಿಯ ಅನುಭವವಾಯಿತು. ಭಗವಾನ್ ಶ್ರೀ ರಾಮನ ಜನ್ಮಸ್ಥಳದ ದೈವಿಕ ಪ್ರಭಾವಲಯವು ಪ್ರತಿಯೊಂದು ಮೂಲೆಯನ್ನೂ ಭಕ್ತಿ ಮತ್ತು ಶಾಂತಿಯಿಂದ ತುಂಬಿದೆ. ಅಯೋಧ್ಯೆಯ ಘಾಟ್‌ಗಳು, ದೇವಾಲಯಗಳು ಮತ್ತು ಜನರ ಅಚಲ ನಂಬಿಕೆಯು ಕಾಲಾತೀತ ಆಧ್ಯಾತ್ಮಿಕ ನಿಧಿಯನ್ನಾಗಿ ಮಾಡುತ್ತದೆ. ಇದು ನಿಜಕ್ಕೂ ಆತ್ಮವನ್ನು ಕಲಕುವ ಅನುಭವ! ಎಂದು ಬರೆದಿದ್ದಾರೆ.
ಇದಕ್ಕೂ ಮುನ್ನ, ಶನಿವಾರ, ಅಭಿಷೇಕ್ ಮನು ಸಿಂಘ್ವಿ ಅವರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ತಲುಪಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಸಂಗಮದಲ್ಲಿ ಸ್ನಾನ ಮಾಡಿದ ನಂತರ, ಅವರು ಹನುಮಂತನ ಗುಡಿ, ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದರು. ಜೊತೆಗೆ ಸಂಗಮದಲ್ಲಿ ಸ್ನಾನ ಮಾಡಿದ ನಂತರ, ದೋಣಿ ವಿಹಾರವನ್ನೂ ಆನಂದಿಸಿದ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ,ಪ್ರಯಾಗರಾಜ್‌ನ ಪವಿತ್ರ ಸಂಗಮ ದಡದಲ್ಲಿ ದೋಣಿ ವಿಹಾರ ಮಾಡುವ ಅದ್ಭುತ ಅನುಭವ ನನಗಾಯಿತು. ಗಂಗಾ, ಯಮುನಾ ಮತ್ತು ಸರಸ್ವತಿಯ ಈ ಪವಿತ್ರ ಸಂಗಮದಲ್ಲಿ ನಾನು ನಂಬಿಕೆ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಅನುಭವಿಸಿದೆ. ಮಹಾ ಕುಂಭಮೇಳದ ಈ ದೈವಿಕ ವಾತಾವರಣ ವಿಶಿಷ್ಟವಾಗಿದೆ ಎಂದು ಬರೆದಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರು ಒಬ್ಬರಾಗಿ ಮಹಾಕುಂಬಕ್ಕೆ ಹಾಗೂ ಅಯೋಧ್ಯೆಯ ರಾಮ ಮಂದರಕ್ಕೆ ಭೇಟಿ ನೀಡುತ್ತಿರುವುದು, ಕಾಂಗ್ರೆಸ್ ಪಕ್ಷದಲ್ಲಿನ ದ್ವಂದ್ವ ರಾಜಕೀಯವನ್ನು ಜಾಹೀರು ಮಾಡಿದಂತಾಗಿದೆ. ಒಂದೆಡೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾಕುಂಭ ಮೇಳದ ಕುರಿತು ಅವಹೇಳನಕಾರಿಯಾದ ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರಾದ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಹಲವಾರು ನಾಯಕರು ಪುಣ್ಯ ಸ್ನಾನ ಮಾಡುತ್ತಿದ್ದಾರೆ.