‘ರಾಜದ್ರೋಹ’ ಕಾಯ್ದೆ ಬದಲಾವಣೆ, ಅಪ್ರಾಪ್ತ ವಯಸ್ಕರ ವಿರುದ್ಧ ಅತ್ಯಾಚಾರಕ್ಕೆ ಗಲ್ಲು – ಅಮಿತ್ ಶಾ ಮಂಡಿಸಿರುವ ಮೂರು ಮಸೂದೆಗಳ ಪ್ರಮುಖಾಂಶಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ರಿಟಿಷರ ಆಳ್ವಿಕೆಯಲ್ಲಿ ರೂಪಿತವಾಗಿದ್ದ ರಾಜದ್ರೋಹಕ್ಕೆ ಶಿಕ್ಷೆ ಇತ್ಯಾದಿಗಳನ್ನು ಬದಲಿಸುವುದೂ ಸೇರಿದಂತೆ, ಹಲವು ಬದಲಾವಣೆಗಳನ್ನು ತಂದಿರುವ ಮೂರು ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದರು.
1860 ರಲ್ಲಿ ರಚಿಸಿದ ಇಂಡಿಯನ್ ಪಿನಲ್ ಕೋಡ್(ಐಪಿಸಿ) ಅನ್ನು ಭಾರತೀಯ ದಂ ಸಂಹಿತಾ ಮಸೂದೆ 2023 ಎಂದೂ, 1898ರಲ್ಲಿ ಜಾರಿಗೆ ಬಂದ ಕ್ರಿಮಿನಲ್ ಪ್ರೊಸೀಜರ್ ಕೋಡ್(ಸಿಆರ್‌ಪಿಸಿ) ಅನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಎಂದೂ, 1872ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಅಂಗೀಕರಿಸಿದ ಇಂಡಿಯನ್ ಎವಿಡೆನ್ಸ್ ಆಕ್ಟ್ ಅನ್ನು ಭಾರತೀಯ ಸಾಕ್ಷ್ಯ ಮಸೂದೆ 2023 ಎಂದು ಬದಲಾಯಿಸಲಾಗಿದೆ.

ಇದು ಕೇವಲ ಹೆಸರುಗಳ ಮಾರ್ಪಾಟಾಗಿರದೇ ಈ ಸಂಹಿತೆಗಳಲ್ಲಿರುವ ಹಲವು ಕಾಯ್ದೆಗಳ ಮಾರ್ಪಾಟು ಮತ್ತು ಶಿಕ್ಷಾವಧಿಗಳ ವ್ಯತ್ಯಾಸವನ್ನೂ ಮಸೂದೆ ಪ್ರಸ್ತಾಪಿಸಿದೆ. ಸಂಸತ್ತಿನಲ್ಲಿ ಮಂಡನೆಯಾಗಿರುವ ಈ ಮಸೂದೆಗಳನ್ನು ಸೆಲೆಕ್ಟ್ ಕಮಿಟಿ ಪರಿಶೀಲಿಸಿದ ನಂತರವಷ್ಟೇ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.

ಸೆಡಿಶನ್ ಅಥವಾ ರಾಜದ್ರೋಹ ಕಾಯ್ದೆಗೆ ಮಾರ್ಪಾಟು

ಸೆಡಿಶನ್ ಎಂಬ ಪದವನ್ನು ಈಗಿನ ಮಸೂದೆಯಲ್ಲಿ ಕೈಬಿಡಲಾಗಿದೆ. ಹಾಗಾದರೆ ದೇಶದ್ರೋಹದ ಚಟುವಟಿಕೆಗಳಿಗೆ ಶಿಕ್ಷೆ ಇಲ್ಲ ಎಂದೇನೂ ಅರ್ಥವಲ್ಲ. ಏಕೆಂದರೆ ಹೊಸ ಮಸೂದೆಯು ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಅಡ್ಡಿ ಮಾಡುವ, ಸಶಸ್ತ್ರ ಕ್ರಾಂತಿಗೆ ಪ್ರೇರೇಪಿಸುವ, ಪ್ರತ್ಯೇಕತಾವಾದಿ ಕೃತ್ಯಗಳಿಗೆ ಕುಮ್ಮಕ್ಕು ಕೊಡುವ ಕೃತ್ಯಗಳಿಗೆ ನಿರ್ದಿಷ್ಟ ಶಿಕ್ಷೆ ನಿಗದಿಪಡಿಸಿದೆ. ಇಂಥವರಿಗೆ ಜೀವಾವಧಿ ಶಿಕ್ಷೆ ಇಲ್ಲವೇ 7 ವರ್ಷಗಳ ಜೈಲು ಅಥವಾ ದಂಡ ವಿಧಿಸುವ, ಅದಲ್ಲದೇ ದಂಡ ಮತ್ತು ಜೈಲು ಶಿಕ್ಷೆಗಳೆರಡನ್ನೂ ನೀಡುವ ಪ್ರಸ್ತಾಪವನ್ನು ಮಸೂದೆ ಮಾಡಿದೆ.

ಪ್ರಮುಖ ಬದಲಾವಣೆಗಳು
ಐದು ಅಥವಾ ಹೆಚ್ಚಿನ ಜನ ಸೇರಿ ನಡೆಸುವ ಗುಂಪು ಥಳಿತದ ಕೃತ್ಯಗಳಿಗೆ ಮರಣದಂಡನೆ ಶಿಕ್ಷೆಯ ಪ್ರಸ್ತಾಪವನ್ನೂ ಮಸೂದೆ ಮಾಡಿದೆ. ಉಳಿದಂತೆ ಘಟನೆಯ ಗಂಭೀರತೆ ಆಧಾರದಲ್ಲಿ ಏಳು ವರ್ಷಗಳಿಗಿಂತ ಕಡಿಮೆ ಇಲ್ಲಜ ಜೈಲು ಶಿಕ್ಷೆ, ದಂಡ ಅಥವಾ ಇವೆರಡನ್ನೂ ನೀಡುವ ಅವಕಾಶವನ್ನು ಮಸೂದೆ ಪ್ರಸ್ತಾಪಿಸಿದೆ.

ಅಪ್ರಾಪ್ತ ವಯಸ್ಕರ ಮೇಲಾಗುವ ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆಯನ್ನು ಪ್ರಸ್ತಾಪಿಸಿರುವುದು ಈ ಮಸೂದೆಯ ಇನ್ನೊಂದು ಪ್ರಮುಖಾಂಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!