ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಬ್‌ಜಿ ಗೇಮ್ ಮೂಲಕ ಪರಿಚಯವಾಗಿ ಪ್ರೀತಿಸಿದ ಯುವಕನಿಗಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತದ ಬಂದ ಸೀಮಾ ಹೈದರ್ ಕೇಸ್ ಇದೀಗ ದಿನಕ್ಕೊಂದು ರೋಚಕತೆ ಪಡೆಯುತ್ತಿದ್ದು, ಉತ್ತರ ಪ್ರದೇಶ ಪೊಲೀಸರಿಂದ ತೀವ್ರ ವಿಚಾರಣೆ ನಡೆಯುತ್ತಿದೆ.
ಪಾಕಿಸ್ತಾನದಿಂದ ನೇಪಾಳಕ್ಕೆ ತೆರಳಿ, ನೇಪಾಳದಿಂದ ಭಾರತಕ್ಕೆ ಆಗಮಿಸಿದ ಸೀಮಾ ಹೈದರ್ ವಿಚಾರಣೆ ವೇಳೆ ಯುಪಿ ಪೊಲೀಸರಿಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಸೀಮಾ ಬಳಿಯಿಂದ 4 ಮೊಬೈಲ್ ಫೋನ್, 5 ಪಾಕಿಸ್ತಾನ ಪಾಸ್‌ಪೋರ್ಟ್, 2 ವಿಡಿಯೋ ಕ್ಯಾಸೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ.
ಸೀಮಾ ಬಳಿ 5 ಪಾಕಿಸ್ತಾನದ ಅಧಿಕೃತ ಪಾಸ್‌ಪೋರ್ಟ್ ಇದ್ದು, ಇದರಲ್ಲಿ ಒಂದು ಪಾಸ್‌ಪೋರ್ಟ್ ಇನ್ನೂ ಬಳಕೆ ಮಾಡಿಲ್ಲ. ಇದರ ಜೊತೆಗೆ ಗುರುತಿನ ಚೀಟಿ ಸೇರಿದಂತೆ ಇತರ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಸೀಮಾ ಪಾಕಿಸ್ತಾನ ಸೇನೆ ಅಥವಾ ಅಲ್ಲಿನ ಗುಪ್ತಚರ ಇಲಾಖೆ ಐಎಸ್‌ಐ ಜತೆ ಸಂಪರ್ಕದಲ್ಲಿದ್ದಾಳಾ ಎಂಬ ಶಂಕೆಯ ಮೇರೆಗೆ ತನಿಖೆ ನಡೆಸುತ್ತಿರುವ ಪೊಲೀಸರ ಭಯೋತ್ಪಾದಕ ನಿಗ್ರಹ ತಂಡ (ಎಟಿಎಸ್) ಇದರ ಭಾಗವಾಗಿ ಆಕೆಯ ಪ್ರಿಯಕರ ಸಚಿನ್ ಮೀನಾ ಹಾಗೂ ಆತನ ತಂದೆ ನೇತ್ರಪಾಲ್ ಸಿಂಗ್‌ನನ್ನೂ ವಿಚಾರಣೆ ನಡೆಸಲಾಗಿದೆ.
ಸಚಿನ್ ಮೀನಾ ಹಾಗೂ ಆತನ ತಂದೆ ನೇತ್ರಪಾಲ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಸೀಮಾ ಹೈದರ್ ವಿಚಾರಣೆಯಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದೆ. ಸೀಮಾ ಹೈದರ್ ಸೋದರ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾಹಿತಿಯೂ ಬಹಿರಂಗವಾಗಿದೆ.
ಸೋಮವಾರ ಸೀಮಾ ಮತ್ತು ಸಚಿನ್‌ರನ್ನು ಎಟಿಎಸ್ 6 ತಾಸುಗಳ ಕಾಲ ವಿಚಾರಣೆ ನಡೆಸಿತ್ತು. ಆಕೆಯ ಮೊಬೈಲ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಲಾಗಿದೆ. ನೊಯ್ಡಾ ನಿವಾಸಿ ಸಚಿನ್‌ಗಾಗಿ ಕಳೆದ ಮೇ ತಿಂಗಳಲ್ಲಿ ಭಾರತಕ್ಕೆ ಬಂದಿದ್ದ ಸೀಮಾ ಈಗ ಆತನೊಂದಿಗೆ ವಾಸಿಸುತ್ತಿದ್ದಾಳೆ.