ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನದಿಗಳು ತುಂಬಿವೆ, ಜಲಪಾತಗಳು ಉಕ್ಕಿ ಹರಿಯುತ್ತಿವೆ. ಈ ರೀತಿ ಪರಿಸ್ಥಿತಿ ಇರುವಾಗ ಹಲವರು ನದಿ, ಜಲಪಾತಗಳ ಬಳಿ ಹೋಗದೇ ಸುರಕ್ಷಿತವಾಗಿರುತ್ತಾರೆ. ಆದರೆ ಕೆಲವರಿಗೆ ಈ ಸಮಯದಲ್ಲಿಯೇ ನೀರಿನ ಬಳಿ ಹೋಗುವ ಗೀಳು ಇರುತ್ತದೆ, ಅಲ್ಲಿ ಸೆಲ್ಫಿ ಹಾಗೂ ವಿಡಿಯೋ ಮಾಡಿ ಜನರಿಗೆ ತೋರಿಸುವ ಹುಚ್ಚಾಟ ಇರುತ್ತದೆ. ಇಂಥವರಿಗೆ ಮುಲಾಜಿಲ್ಲದೆ ಲಾಠಿ ರುಚಿ ತೋರಿಸಿ ಎಂದು ಸರ್ಕಾರ ಹೇಳಿದೆ.
ರಾಜ್ಯದ ಜನರು ನಮ್ಮ ಬಗ್ಗೆ ತಪ್ಪು ತಿಳಿದುಕೊಂಡರೂ ಪರವಾಗಿಲ್ಲ. ಆದರೆ, ಅವರ ಜೀವ ಉಳಿಸುವುದು ಮುಖ್ಯ. ಹೀಗಾಗಿ, ಅಧಿಕಾರಿಗಳ ಮಾತು ಕೇಳದೆ ನದಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಮೀನು ಹಿಡಿಯಲು, ಕೃಷಿ ಚಟುವಟಿಕೆ, ಸೆಲ್ಫಿಗಾಗಿ ಯಾರೂ ನದಿ ಅಥವಾ ಹೊಳೆಗೆ ಇಳಿಯಬಾರದು. ಒಂದು ವೇಳೆ ಒಳ್ಳೆ ಮಾತಿಗೆ ಗೌರವ ಕೊಡದೆ ನದಿಗೆ ಇಳಿದವರಿಗೆ ಲಾಠಿ ಏಟು ನಿಶ್ಚಿತ. ನಮ್ಮ ರಾಜ್ಯದಲ್ಲಿ ಪ್ರಾಣಹಾನಿಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದರು.