March 12, 2026
Thursday, March 12, 2026
spot_img

ಕ್ರಿಕೆಟ್‌ಗೆ ನಿಸ್ವಾರ್ಥ ಕೊಡುಗೆ: ಕನ್ನಡಿಗ ರಾಹುಲ್ ದ್ರಾವಿಡ್‌ ಕೈ ಸೇರಿತು ಜೀವಮಾನ ಸಾಧನೆ ಪ್ರಶಸ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐಯ ಪ್ರತಿಷ್ಠಿತ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಘೋಷಿಸಲಾಗಿದೆ.

ಮಾರ್ಚ್ 15ರಂದು ದೆಹಲಿಯಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ‘ನಮನ’ ಪ್ರಶಸ್ತಿ ಸಮಾರಂಭದಲ್ಲಿ ದ್ರಾವಿಡ್ ಅವರನ್ನು ಈ ಗೌರವದಿಂದ ಸನ್ಮಾನಿಸಲಾಗುವುದಾಗಿ ತಿಳಿದು ಬಂದಿದೆ.

ಭಾರತೀಯ ಕ್ರಿಕೆಟ್‌ನ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದ ದ್ರಾವಿಡ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಜೊತೆಗಿನ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ನ ಭಾಗವಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸ್ಥಿರ ಆಟದ ಶೈಲಿಗೆ ‘ದಿ ವಾಲ್’ ಎಂಬ ಹೆಸರನ್ನೂ ಪಡೆದಿದ್ದರು. ಟೆಸ್ಟ್‌ನಲ್ಲಿ 13,288 ರನ್ ಗಳಿಸಿರುವ ದ್ರಾವಿಡ್ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೂ ಅವರು 10 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಇದನ್ನೂ ಓದಿ:

2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ದ್ರಾವಿಡ್ ತರಬೇತುದಾರರಾಗಿ ಹೊಸ ಅಧ್ಯಾಯ ಆರಂಭಿಸಿದರು. ಅವರ ಮಾರ್ಗದರ್ಶನದಲ್ಲಿ ಭಾರತ ಅಂಡರ್-19 ತಂಡ 2018ರ ವಿಶ್ವಕಪ್ ಗೆದ್ದಿತು. ನಂತರ 2021ರಲ್ಲಿ ಭಾರತದ ಹಿರಿಯ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ಅವರು, ತಂಡವನ್ನು 2023ರ ಏಕದಿನ ವಿಶ್ವಕಪ್ ಫೈನಲ್‌ಗೆ ಕೊಂಡೊಯ್ದಿದ್ದರು. 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗುವುದಕ್ಕೂ ಅವರ ತರಬೇತಿ ಪ್ರಮುಖ ಕಾರಣವಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !