August 26, 2026
Wednesday, August 26, 2026
spot_img

ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಆಗ್ರಹಿಸಿ ಚನ್ನರಾಯಪಟ್ಟಣದಲ್ಲಿ ಅರೆಬೆತ್ತಲೆ ಪ್ರತಿಭಟನೆ!

ಹೊಸದಿಗಂತ ವರದಿ ಹಾಸನ:

ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಲು ವಿಳಂಬ ಮಾಡುತ್ತಿರುವ ಚನ್ನರಾಯಪಟ್ಟಣ ತಾಲ್ಲೂಕು ಆಡಳಿತದ ಕಾರ್ಯ ವೈಖರಿ ಖಂಡಿಸಿ ಬಿಜೆಪಿಯ ಕಲೆ ಮತ್ತು ಸಾಹಿತ್ಯ ಪ್ರಾಕೋಷ್ಟ ಜಿಲ್ಲಾ ಸಂಚಾಲಕ ನಂಜುಂಡ ಮೈಮ್ ಮತ್ತು ತಾಲೂಕು ಬಿಜೆಪಿ ಮುಖಂಡರು ಅರೆಬೆತ್ತಲೆ ಚಳವಳಿ ನಡೆಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಿ 10 ತಿಂಗಳು ಕಳೆದರೂ ಇದುವರೆಗೆ ಲೋಕಾರ್ಪಣೆ ಮಾಡಿಲ್ಲ. ಪ್ರತಿಮೆ ಲೋಕಾರ್ಪಣೆ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಮೆ ಎದುರಿನಲ್ಲಿಯೇ ಎರಡು ತಿಂಗಳ ಹಿಂದೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ, ಮನವಿಗೆ ಸ್ಪಂದಿಸದೆ ಕಾಲಹರಣ ಮಾಡಿ ಪ್ರತಿಮೆಯ ಅನಾವರಣ ಮುಂದೂಡುತ್ತಿದ್ದಾರೆ. ಇದರ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಎರಡು ತಿಂಗಳು ಕಳೆದರೂ ಇನ್ನೂ ಅನಾವರಣ ಮಾಡಲು ಹಿಂದೇಟು ಹಾಕುತಿರುವ ತಾಲ್ಲೂಕು ಆಡಳಿತದ ಕಾರ್ಯ ವೈಖರಿ ಖಂಡಿಸಿ ಇಂದು ಅರೆಬೆತ್ತಲೆ ಚಳವಳಿ ಮಾಡುತ್ತಿದ್ದೇವೆ ಎಂದರು.

ನಮ್ಮ ಮನವಿಯನ್ನು ಹಾಸನ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಸೆ.20ರ ನಂತರವೂ ಪ್ರತಿಮೆ ಲೋಕಾರ್ಪಣೆಗೆ ಕ್ರಮ ಕೈಗೊಳ್ಳದಿದ್ದರೆ ರಾಜಕೀಯ ನಾಯಕರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಅದ್ದೂರಿ ಕಾರ್ಯಕ್ರಮದೊಂದಿಗೆ ಪ್ರತಿಮೆ ಅನಾವರಣ ಮಾಡಲಾಗುವುದು ಎಂದರು.

ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಅರೆಬೆತ್ತಲೆ ಚಳವಳಿ ನಡೆಸಿ, ತದನಂತರ ತಾಲೂಕು ಕಚೇರಿ ಮುಂಭಾಗ ಮೆರವಣಿಗೆ ನಡೆಸಿ, ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್, ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತಂದು ಶೀಘ್ರವೇ ಪ್ರತಿಮೆ ಲೋಕಾರ್ಪಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅರೆಬೆತ್ತಲೆ ಚಳವಳಿಯಲ್ಲಿ ಶ್ರವಣಬೆಳಗೊಳ ಮಂಡಲದ ಅಧ್ಯಕ್ಷ ಪರಮ ಗಂಗಾಧರ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್, ಗನ್ನಿ ವಿಶ್ವನಾಥ್, ಮಾಜಿ ಅಧ್ಯಕ್ಷ ರಂಗೇಗೌಡ, ಉಪಾಧ್ಯಕ್ಷ ಅಶೋಕ್ ಶೆಟ್ಟಿಹಳ್ಳಿ, ಮುಖಂಡ ಸತೀಶ್ ಗೌಡಗೆರೆ ಇನ್ನಿತರರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !