ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು ನಿಧನ ಹೊಂದಿದ್ದಾರೆ.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ಸಮಯದಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ.
ಸರೋಜಾ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹ ಆದರು. 1986ರಲ್ಲಿ ಪತಿ ನಿಧನ ಹೊಂದಿದರು. ಈಗ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
1955ರಲ್ಲಿ ಬಂದ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಸರೋಜಾ ದೇವಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು. ಆ ಬಳಿಕ ಆಫರ್ಗಳು ಅವರನ್ನು ಹುಡುಕಿ ಬಂದವು. ಕೇವಲ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೋ ಸರೋಜಾ ದೇವಿ ಅವರು ನಟಿಸಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರರಂಗದ ಸಾಧನೆಗೆ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಪುರಸ್ಕರಿಸಿತ್ತು.
ಸರೋಜಾದೇವಿ ಅವರು ಕನ್ನಡದಲ್ಲಿ ಡಾ. ರಾಜ್ಕುಮಾರ್ ಅವರೊಂದಿಗೆ ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ದೇವಸುಂದರಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಸರೋಜಾದೇವಿ ಅವರು ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಮತ್ತು ಎಂ.ಜಿ. ರಾಮಚಂದ್ರನ್ ಅವರೊಂದಿಗೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರು ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಮತ್ತು ಸುನೀಲ್ ದತ್ ಅವರೊಂದಿಗೆ ನಟಿಸಿದ್ದಾರೆ.