April 10, 2026
Friday, April 10, 2026
spot_img

ಹಿರಿಯ ಸಾಹಿತಿ, ಡಿವಿಜಿ ಒಡನಾಡಿ, ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾಮಾಜಿಕ ಚಿಂತನೆ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.

88 ವರ್ಷ ವಯಸ್ಸಿನ ಅವರು ಬೆಂಗಳೂರಿನ ಶಂಕರಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ನಾಡು ಒಬ್ಬ ಹಿರಿಯ ಚಿಂತಕ, ಲೇಖಕ ಮತ್ತು ಸಮಾಜಮುಖಿ ವ್ಯಕ್ತಿತ್ವವನ್ನು ಕಳೆದುಕೊಂಡಿದೆ.

ರಾಷ್ಟ್ರೋತ್ಥಾನ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷರಾಗಿಯೂ, ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದ ರಾಮಸ್ವಾಮಿ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 12 ಗಂಟೆಯವರೆಗೆ ಕೇಶವಶಿಲ್ಪದಲ್ಲಿರುವ ರಾಷ್ಟ್ರೋತ್ಥಾನ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.

ಇದನ್ನೂ ಓದಿ:

ಪತ್ರಕರ್ತ, ಲೇಖಕ, ವಿಮರ್ಶಕ, ಚಿಂತಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಅವರು ನಾಡಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು. ಕನ್ನಡದ ಜೊತೆಗೆ ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್ ಮತ್ತು ಫ್ರೆಂಚ್ ಭಾಷೆಗಳಲ್ಲೂ ಪ್ರಾವೀಣ್ಯತೆ ಹೊಂದಿದ್ದರು. 1950ರ ದಶಕದಲ್ಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಅವರು, ‘ಸುಧಾ’ ವಾರಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 55ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಅವರು ಸಾವಿರಾರು ಲೇಖನಗಳ ಮೂಲಕ ಚಿಂತನೆಗೆ ಹೊಸ ದಿಕ್ಕು ನೀಡಿದ್ದರು. ‘ಶತಮಾನದ ತಿರುವಿನಲ್ಲಿ ಭಾರತ’ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಲಭಿಸಿದ್ದವು. ನಾಡೋಜ, ರಾಜ್ಯೋತ್ಸವ, ಪಂಪ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಅವರ ಸಾಧನೆಗೆ ಸಾಕ್ಷಿಯಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !