ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರಗೊಳ್ಳುತ್ತಿದ್ದಂತೆ, ಮತ್ತೊಂದು ಚಂಡಮಾರುತ ಭಾರತ ಕರಾವಳಿಯ ಮೇಲಿನ ಭೀತಿಯನ್ನು ಹೆಚ್ಚಿಸಿದೆ. ಮುಂದಿನ 48 ಗಂಟೆಗಳಲ್ಲಿ ಈ ವ್ಯವಸ್ಥೆ ‘ಸೆನ್ಯಾರ್’ ಎಂಬ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಈಗಾಗಲೇ ಮಲಕ್ಕಾ ಜಲಸಂಧಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಸಕ್ರಿಯವಾಗಿರುವ ಈ ಚಂಡಮಾರುತ ನಿಧಾನವಾಗಿ ಬಂಗಾಳಕೊಲ್ಲಿಯ ಆಗ್ನೇಯಕ್ಕೆ ಚಲಿಸುತ್ತಿದ್ದು, ನವೆಂಬರ್ 26ರ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸೂಚನೆಗಳಿವೆ.
ಐಎಂಡಿ ಪ್ರಕಾರ, ನವೆಂಬರ್ 27ರ ಸುಮಾರಿಗೆ ಗಾಳಿಯ ವೇಗ ಗಂಟೆಗೆ 100 ಕಿ.ಮೀ ತಲುಪುವ ಸಾಧ್ಯತೆ ಇದ್ದು, ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ, ಅಲೆಗಳ ಆರ್ಭಟ ಹಾಗೂ ಸಮುದ್ರ ಪ್ರಕ್ಷುಬ್ಧ ಸ್ಥಿತಿ ಉಂಟಾಗಬಹುದು. ಈಗಾಗಲೇ ನವೆಂಬರ್ 25 ರಿಂದ 27 ರ ನಡುವೆ ಒಡಿಶಾದ ಕರಾವಳಿಗೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಚಂಡಮಾರುತದ ಮಾರ್ಗದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ನವೆಂಬರ್ 26 ನಂತರ ಇದು ತಮಿಳುನಾಡು–ಆಂಧ್ರ ಕರಾವಳಿಯ ಕಡೆಗೆ ಸಾಗುವುದೋ, ಅಥವಾ ಉತ್ತರದತ್ತ ತಿರುಗಿ ಒಡಿಶಾ–ಬಾಂಗ್ಲಾದೇಶ ದಿಕ್ಕಿಗೆ ಹೋಗುವುದೋ ಎಂಬುದನ್ನು ಹವಾಮಾನ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

