ಹೊಸದಿಗಂತ ವರದಿ,ಮಡಿಕೇರಿ:
ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಆಟೋ ಚಾಲಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶನಿವಾರ ತಡರಾತ್ರಿ ಹಾಸನ ಜಿಲ್ಲೆಯ ಅರಸಿಕೇರೆಯಿಂದ ಮಡಿಕೇರಿ ದಸರಾ ವೀಕ್ಷಣೆಗೆಂದು ಯಮಹಾ ಆರ್‌ಎಕ್ಸ್ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ ಸಂದರ್ಭ ಹಿಂಬದಿ ಸವಾರ ಗೋಪಿನಾಥ್ (31) ಮೃತಪಟ್ಟಿದ್ದಾರೆ.
ಗದ್ದೆಹಳ್ಳದ ಬಳಿ ಸವಾರನ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿಯಾದ ಬೈಕ್ ಮೋರಿಯೊಳಗೆ ಬಿದಿದ್ದು, ಹಿಂಬದಿ ಸವಾರ ರಸ್ತೆ ಬದಿಗೆ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವದ ಹಿನ್ನಲೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀವ್ರ ಗಾಯಗೊಂಡ ಬೈಕ್ ಚಾಲಕನಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಡಿಕೇರಿ ದಸರಾ ಸಮಾರಂಭ ಮುಗಿಸಿ ಹುಣಸೂರಿನ ಊರಿಗೆ ಹಿಂತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿಯಾಗಿದೆ.ವಾಹನದಲ್ಲಿ 9 ಮಂದಿ ಪ್ರಯಾಣಿಸುತ್ತಿದ್ದು, ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಚಂದನ್ (21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಆತ್ಮಹತ್ಯೆ : ಕಂಬಿಬಾಣೆ ಆಟೋಚಾಲಕ ಸುಧೀಶ್ (45) ಎಂಬವರು ದಸರಾ ಸಮಾರಂಭವನ್ನು ಮುಗಿಸಿ ಮನೆಗೆ ತೆರಳಿದ್ದು, ಯಾರೂ ಇಲ್ಲದ ಸಂದರ್ಭ ನೇಣು ಬಿಗಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಆಗಲಿದ್ದಾರೆ.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹೆಚ್.ವಿ.ಚಂದ್ರಶೇಖರ್ ತಮ್ಮ ಸಿಬ್ಬಂದಿಗಳೊಂದಿಗೆ ತೆರಳಿ ಮಹಜರು ನಡೆಸುವುದರೊಂದಿಗೆ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.