ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಕಂಗಾಲಾದ ಆಟೋ ರಿಕ್ಷಾ ಮತ್ತು ಕ್ಯಾಬ್ ಚಾಲಕರ ಹಿತಾಸಕ್ತಿ ಕಾಪಾಡಲು ಹೊಸ ಆ್ಯಪ್ ಸಿದ್ಧಪಡಿಸಲು ಸರಕಾರ ನಿರ್ಧರಿಸಿದೆ. ಈ ಆ್ಯಪ್ ನಾಲ್ಕೈದು ತಿಂಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಪ್ರತಿ ಕಿ.ಮೀ.ಗೆ ಇಂತಿಷ್ಟು ದರ ನಿಗದಿಗೂ ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy) ತಿಳಿಸಿದ್ದಾರೆ.
ಈ ಹೊಸ ಆ್ಯಪ್ ಗ್ರಾಹಕರಿಗೆ ಲಭ್ಯವಾದರೆ, ಖಾಸಗಿ ಸಾರಿಗೆ ಒಕ್ಕೂಟಗಳು ಹೆಚ್ಚುವರಿ ಹಣ ವಸೂಲಿ ಮಾಡುವುದಕ್ಕೆ ಬ್ರೇಕ್ ಬೀಳಲಿದೆ. ಹೊಸ ಆ್ಯಪ್ ಜೊತೆಗೆ, ಬಿಎಂಆರ್‌ಸಿಎಲ್ ಜೊತೆ ಸೇರಿ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಆಟೋ ಸ್ಟ್ಯಾಂಡ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಶಕ್ತಿ ಯೋಜನೆ ಜಾರಿ ನಂತರ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್ ಮಾಲೀಕರ ಆದಾಯಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಈ ಯೋಜನೆ ಹಿಂಪಡೆಯುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಜುಲೈ 27 ರಂದು ಬೆಂಗಳೂರು ಖಾಸಗಿ ಸಾರಿಗೆ ಒಕ್ಕೂಟಗಳು ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು.
ಆಟೋ ಬಂದ್ ಘೋಷಣೆ ನಂತರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇತ್ತೀಚೆಗೆ ಸಾರಿಗೆ ಚಾಲಕರು ಮಾಲೀಕರೊಂದಿಗೆ ಸರಣಿ ಸಭೆ ನಡೆಸಿದ್ದರು. ಈ ವೇಳೆ ಆಟೋ, ಕ್ಯಾಬ್ ಚಾಲಕರು ಹಾಗೂ ಮಾಲೀಕರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು.