ಹೊಸದಿಗಂತ ವರದಿ,ಮಡಿಕೇರಿ:
ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸುವ ಸಂಬಂಧ ಪ್ರತ್ಯೇಕ ಸಭೆಗಳನ್ನು ನಡೆಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.
ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿನ ವನ್ಯಜೀವಿ ರಕ್ಷಣೆ ಮತ್ತು ಪೋಷಣೆಯ ಕುರಿತು ಮಂಗಳವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಿರುವ 9 ಜಿಲ್ಲೆಗಳಿಗೆ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಾರದಲ್ಲಿ ಕನಿಷ್ಟ 2 ದಿನ ನಿಯೋಜಿತ ಜಿಲ್ಲೆಯಲ್ಲೇ ಉಳಿದು ಪರಿಸ್ಥಿತಿಯನ್ನು ನಿಭಾಯಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಆನೆಗಳು ನಾಡಿಗೆ ಬಾರದಂತೆ ತಡೆಯಲು ನಮ್ಮ ಬಳಿ ಇರುವ ಉತ್ತಮ ಮಾರ್ಗೋಪಾಯ ಎಂದರೆ ರೈಲ್ವೆ ಬ್ಯಾರಿಕೇಡ್ ಆಗಿದೆ. ಆದರೆ ಇದು ಒಂದೆರಡು ವರ್ಷದಲ್ಲಿ ಆಗುವ ಕೆಲಸವಲ್ಲ. ಬಜೆಟ್’ನಲ್ಲಿ 100 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದ್ದು, ಆನೆ ಹಾವಳಿ ಹೆಚ್ಚಾಗಿರುವ ಕಡೆ ರೈಲ್ವೆ ಬ್ಯಾರಿಕೇಡ್ ಹಾಕಲು ಕ್ರಮ ವಹಿಸಲಾಗಿದೆ ಎಂದು ಹೇಳಿದರಲ್ಲದೆ, ಆನೆಗಳ ಸಮಸ್ಯೆ ಇರುವ ಭಾಗದ ಶಾಸಕರೊಂದಿಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡೋಣ ಎಂದೂ ನುಡಿದರು.
ಕಳೆದ ಏಪ್ರಿಲ್’ನಿಂದೀಚೆಗೆ ರಾಜ್ಯದಲ್ಲಿ ಒಟ್ಟು 43 ಜನರು ಮಾನವ-ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗಿದ್ದು, ಈ ಪೈಕಿ 30 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಚಾಮರಾಜನಗರದಲ್ಲಿ 10, ಕೊಡಗು ಜಿಲ್ಲೆಯಲ್ಲಿ 7, ರಾಮನಗರ 3, ಬೆಂಗಳೂರು ಮತ್ತು ಮೈಸೂರು, ಹಾಸನ ವೃತ್ತದಲ್ಲಿ ತಲಾ 2, ಶಿವಮೊಗ್ಗದಲ್ಲಿ ಒಬ್ಬರು ಆನೆ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ಸಚಿವರು ವಿವರಿಸಿದರು.
ಉಳಿದಂತೆ ಕಾಡುಹಂದಿ ದಾಳಿಗೆ ಇಬ್ಬರು, ಮೊಸಳೆಗೆ ಒಬ್ಬರು ಬಲಿಯಾಗಿದ್ದಾರೆ. ಕರಡಿ ದಾಳಿಯಿಂದ ಇಬ್ಬರು ಸಾವಿಗೀಡಾಗಿದ್ದರೆ, ಚಿರತೆ ದಾಳಿಯಿಂದ 3 ಸಾವು ಸಂಭವಿಸಿದೆ. ಹುಲಿ ದಾಳಿಯಿಂದ 4 ಸಾವು ಸಂಭವಿಸಿದ್ದರೆ, ಕೋತಿ ಕಚ್ಚಿ ಒಬ್ಬರು ಮೃತಪಟ್ಟಿದ್ದಾರೆ ಎಂದೂ ಮಾಹಿತಿ ನೀಡಿದರು.
ಸಚಿವ ಬೋಸರಾಜ್ ಅವರು, ಆನೆಯಿಂದ ಹೆಚ್ಚಿನ ಸಾವು ಸಂಭವಿಸಿದೆ. ವೈಜ್ಞಾನಿಕವಾಗಿ ವಿದ್ಯುತ್ ತಂತಿ ಬೇಲಿ ಹಾಕಿದರೂ ಅತ್ಯಂತ ಬುದ್ಧಿವಂತಿಕೆಯಿಂದ ಆನೆ ದಾಟಿ ಬರುತ್ತದೆ. ಹೀಗಾಗಿ ಆನೆ ಹಾವಳಿ ತಡೆಯಲು ವ್ಯವಸ್ಥೆ ರೂಪಿಸಬೇಕಾಗುತ್ತದೆ. ಬೆಳೆ ಹಾನಿ ಹೆಚ್ಚಾಗುತ್ತಿದೆ. ಕಾಫಿ ತೋಟಗಳಲ್ಲಿ ಆನೆಗಳು ಉಳಿಯುತ್ತಿವೆ. ಹೀಗಾಗಿ ಆನೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕೆಂದರು.
ಈ ಸಂದರ್ಭ ಆನೆಗಳ ಸ್ಥಳಾಂತರ ಸಂಬಂಧ ಪ್ರತ್ಯೇಕವಾಗಿ ಸಭೆ ಕರೆದು ಪರಿಹರಿಸಲಾಗುವುದು. ಒಂಭತ್ತು ಬಾರಿ ಅಂಬಾರಿ ಹೊತ್ತ ಅರ್ಜುನನ ಸಾವು ಬಹಳ ದುಃಖಕರ ಸಂಗತಿಯಾಗಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸುವ ಕುರಿತು ಸಭಾಧ್ಯಕ್ಷರೊಡನೆ ಚರ್ಚಿಸುವುದಾಗಿಯೂ ಈಶ್ವರ ಖಂಡ್ರೆ ಇದೇ ಸಂದರ್ಭ ತಿಳಿಸಿದರು.
ಸಚಿವ ಜಾರ್ಜ್ ಸಲಹೆ: ಆನೆಗಳ ಸ್ಥಳಾಂತರ ಕಷ್ಟಸಾಧ್ಯವಾದ ಕೆಲಸ. ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಕಾಡೊಳಗೆ ಆಹಾರ ಸಿಗುತ್ತಿಲ್ಲ ಎಂಬ ದೂರಿದೆ. ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಆ ಸಂಖ್ಯೆ ಹೆಚ್ಚಿಸಬೇಕು. ಪುಂಡಾನೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್, ಶಾಸಕರಾದ ಡಾ. ಮಂಥರ್ ಗೌಡ, ಸಿಮೆಂಟ್ ಮಂಜು, ನಯನ ಮೋಟಮ್ಮ, ರಾಜೇಗೌಡ, ಸುರೇಶ್, ಶ್ರೀನಿವಾಸ್, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಆನೆಗಳ ಜೊತೆಗೆ ಚಿರತೆ ಹಾವಳಿಯೂ ಹೆಚ್ಚಾಗಿದೆ. ಜನ ಭಯ ಭೀತಿಯಿಂದ ಬದುಕುವಂತಾಗಿದೆ. ನಾವು ಕ್ಷೇತ್ರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ವನ್ಯಜೀವಿ-ಮಾನವ ಸಂಘರ್ಷ ತಡೆಯಲು ಕ್ರಮ ಕೈಗೊಳ್ಳಲೇಬೇಕು ಜೊತೆಗೆ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ದೊರಕಿಸಲು ಈ ಅಧಿವೇಶನದಲ್ಲೇ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಆನೆ, ಹುಲಿ, ಕಾಡು ಹಂದಿಗಳು ಹಾಗೂ ಇತರೆ ವನ್ಯಜೀವಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕಾಡಾನೆಗಳನ್ನು ಪ್ರತ್ಯೇಕವಾಗಿ ಸ್ಥಳಾಂತರಿಸಿ ಕಾಡು ಹಂದಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಹಕಾರ ಸಚಿವ ರಾಜಣ್ಣ ಹಾಗೂ ವಿಧಾನಸಭಾ ಉಪಸಭಾಪತಿ ಪ್ರಾಣೇಶ್, ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ಬೇಲೂರು ಶಾಸಕ ಸುರೇಶ್, ಸಕಲೇಶಪುರ ಶಾಸಕ ಮಂಜುನಾಥ, ಚಿಕ್ಕಮಗಳೂರು ಶಾಸಕ ತಿಮ್ಮಯ್ಯ, ಶೃಂಗೇರಿ ಶಾಸಕ ದೇವರಾಜೇಗೌಡ, ಮೂಡಿಗೆರೆ ಶಾಸಕರಾದ ನಯನ ಮೊಟಮ್ಮ ಉಪಸ್ಥಿತರಿದ್ದರು.