ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿ ಗಣತಿ ಮರು ಸಮೀಕ್ಷೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಸೇರಿದಂತೆ , ರಾಜ್ಯದಲ್ಲಿ ಸಂಭವಿಸಿದ ಸರಣಿ ಆಡಳಿತ ವೈಫಲ್ಯ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಸುನೀಲ್ ಕುಮಾರ್, ಸುಮಾರು 165 ಕೋಟಿ ವೆಚ್ಚ ಮಾಡಿ ತಯಾರಿಸಿದ ಜಾತಿಗಣತಿ ವರದಿಯನ್ನು , ಈಗ ದತ್ತಾಂಶ ಸರಿಯಿಲ್ಲ ಎಂದು ಕೈಬಿಟ್ಟು ಮರು ಸಮೀಕ್ಷೆಗೆ ನಿರ್ಧರಿಸುವ ಮೂಲಕ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡಲಾಗಿದೆ. ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಜನಗಣತಿಯೊಂದಿಗೆ, ಜಾತಿ ಸಮೀಕ್ಷೆ ನಡೆಸುವುದಾಗಿ ಘೋಷಿಸಿದ್ದು, ರಾಜ್ಯ ಸರ್ಕಾರ ಮರು ಜಾತಿ ಸಮೀಕ್ಷೆಗೆ ಮುಂದಾಗದೆ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕಾಂಗ್ರೆಸ್ ಹೈಕಮಾಂಡ್ ಮರು ಜಾತಿ ಸಮೀಕ್ಷೆಗೆ ಸೂಚಿಸಿರುವುದು ರಾಜ್ಯದ ಆಡಳಿತ ವೈಫ್ಯಲಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು. ಸಂಸದ ಪಿ. ಸಿ. ಮೋಹನ್, ಜಾತಿ ಗಣತಿ ಮೇಲೆ ರಾಜ್ಯದ ಜನರಿಗೆ ಸಂಪೂರ್ಣ ವಿಶ್ವಾಸ ಇಲ್ಲದಂತಾಗಿದ್ದು, ಮರು ಸಮೀಕ್ಷೆಯಲ್ಲಿ ಅಗತ್ಯವಿಲ್ಲ ಎಂದರು.