ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಒಂದು ವಾರದ ಅವಧಿಯಲ್ಲಿ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರೂರು ಎಂಬಲ್ಲಿ ಒಟ್ಟು ಐದು ಮಂಗಗಳು ಮೃತಪಟ್ಟಿವೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿ ಮಂಗಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವುದು ಮಂಗನ ಕಾಯಿಲೆಯ ಮುನ್ಸೂಚನೆಯೇ ಎಂಬ ಭಯ ಸೃಷ್ಟಿಸಿದೆ.
ಸತ್ತ ಐದು ಮಂಗಗಳಲ್ಲಿ ನಾಲ್ಕು ಮಂಗಗಳು ಈಗಾಗಲೇ ಸಂಪೂರ್ಣ ಕೊಳೆತು ಹೋಗಿದ್ದು, ಒಂದು ಮಂಗದ ಶವವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಕಳೆದ ವರ್ಷವೂ ಇದೇ ಭಾಗದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದರಿಂದ, ಈ ಬಾರಿ ಇಲಾಖೆಯು ತೀವ್ರ ನಿಗಾ ವಹಿಸಿದೆ.
ಮಂಗಗಳ ಸಾವಿಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ವರದಿ ಬಂದ ನಂತರವಷ್ಟೇ ಇದು ಮಂಗನ ಕಾಯಿಲೆಯೇ ಅಥವಾ ಬೇರೆ ಯಾವುದಾದರೂ ಕಾರಣವೇ ಎಂಬುದು ಸ್ಪಷ್ಟವಾಗಲಿದೆ. ಆದರೆ, ಮಲೆನಾಡು ಜಿಲ್ಲೆಗಳಲ್ಲಿ ಈಗಾಗಲೇ ಈ ಕಾಯಿಲೆ ಪಸರಿಸುತ್ತಿರುವುದರಿಂದ ಕರಾವಳಿ ಗಡಿ ಭಾಗದ ಜನರು ಆತಂಕಗೊಂಡಿದ್ದಾರೆ.

