Monday, December 8, 2025

ಇ-ಖಾತಾ ತ್ವರಿತ ವಿಲೇವಾರಿಗಾಗಿ ಸೇವಾ ಕೇಂದ್ರಗಳು? ತುಷಾರ್ ಗಿರಿನಾಥ್ ಹೇಳಿದ್ದೇನು?

ಹೊಸದಿಗಂತ ವರದಿ ಬೆಂಗಳೂರು:

ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿ ಇ-ಖಾತಾ ತ್ವರಿತ ವಿಲೇವಾರಿಗಾಗಿ ಪಾಸ್ ಪೋರ್ಟ್ ಕೇಂದ್ರ ಮಾದರಿಯಲ್ಲಿ ಸೇವಾ ಕೇಂದ್ರಗಳ ಪ್ರಾರಂಭಿಸಲಾಗುವುದೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿ ನಾಥ್ ತಿಳಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಕುರಿತು ಜಿಬಿಎ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ಖಾತಾ ಪಡೆಯುವಲ್ಲಿ ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಜಿಬಿಎಯ ಐದು ಪಾಲಿಕೆಗಳ 10 ವಲಯಗಳಲ್ಲಿ ಒಂದರಂತೆ ಪಾಸ್ ಪೋರ್ಟ್ ಕೇಂದ್ರ ಮಾದರಿಯಲ್ಲಿ 10 ಸೇವಾಕೇಂದ್ರ ಆರಂಭಿಸಲು ತೀರ್ಮಾನಿಸಿದೆ ಎಂದು ತಿಳಿಸಿದರು.

ಕಣ್ಗಾವಲು ತಂಡ ನಿಯೋಜನೆ:
ಇ-ಖಾತಾ ವಿಚಾರದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ಮೇಲೆ ನಿಗಾವಗಿಸಲು 25 ಜನ ಅಧಿಕಾರಿ,ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ಒಳಗೊಂಡ ಕಣ್ಗಾವಲು ತಂಡವನ್ನು ನಿಯೋಜನೆ ಮಾಡಲಾಗಿದೆ. ಅದರ ಮೂಲಕ ಕಾರಣಗಳಿಲ್ಲದೆ ತಿರಸ್ಕರಿಸಿದವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಾಗುವುದೆಂದು ಹೇಳಿದರು.

8.16 ಲಕ್ಷ ಇ-ಖಾತಾ ವಿತರಣೆ: 8.21 ಲಕ್ಷ ಇ-ಖಾತಾ ಅರ್ಜಿ ಸಲ್ಲಿಕೆಯಾಗಿದ್ದು,ಅದರಲ್ಲಿ ಈಗಾಗಲೇ 8.16 ಲಕ್ಷ ಇ-ಖಾತಾ ವಿತರಿಸಲಾಗಿದೆ. ಬೆಂಗಳೂರು ಒನ್ ಹಾಗೂ ಸುಮಾರು 1000 ಸ್ವಯಂ ಸೇವಕರ ಮೂಲಕವೂ ಇ-ಖಾತಾ ಪಡೆಯಬಹುದಾಗಿದೆ. ನಾಗರಿಕರಿಗೆ ಪಾರದರ್ಶಕತೆ ಹಾಗೂ ಸುಗಮವಾಗಿ ಇ-ಖಾತಾ ನೀಡುವ ಸಲುವಾಗಿ ರೌಂಡ್ ರಾಬಿನ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಅದರಿಂದ ಕೆಲ ಸಮಸ್ಯೆಗಳಾಗಿತ್ತು. ಇದೀಗ ಆ ವ್ಯವಸ್ಥೆಯನ್ನು ತೆಗೆದುಹಾಗಿ ಬೇರೆ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮಾಡುವ ಸಲುವಾಗಿ ಸುಮಾರು 3252 ಅರ್ಜಿಗಳು ಬಂದಿದ್ದು, ಆ ಪೈಕಿ ಶೇ. 98 ಮಂದಿ ನಕ್ಷೆಯನ್ನೇ ಅಪ್‌ಲೋಡ್ ಮಾಡಿರುವುದಿಲ್ಲ. ಈ ಸಂಬಂಧ ಅರ್ಜಿಗಳನ್ನು ಪರಿಶೀಲಿಸಿ ಕೂಡಲೆ ವಿಲೇವಾರಿ ಮಾಡಲು ಕ್ರಮವಹಿಸಲಾಗುವುದೆಂದು ಹೇಳಿದರು.

ಮಧ್ಯವರ್ತಿಗಳ ಮೂಲಕ ಇ-ಖಾತಾ ಮಾಡಿಸಿಕೊಳ್ಳುವುದಕ್ಕೆ ನಾಗರಿಕರು ಮುಂದಾಗಬಾರದು. ಎಲ್ಲಾ ನಾಗರಿಕರು ತಾಳ್ಮೆಯಿಂದಿದ್ದು, ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ, ಸ್ವಲ್ಪ ಅವಧಿ ಕಾದರೆ, ಕಾಲಮಿತಿಯೊಳಗಾಗಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ತಾಂತ್ರಿಕ ಸಮಸ್ಯೆಗಳಿದ್ದರೆ ಮಾತ್ರ ತಡವಾಗುತ್ತಿದ್ದು, ಕಾರಣವಿಲ್ಲದೆ ತಿರಸ್ಕರಿಸುವ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಗುವುದೆಂದು ತಿಳಿಸಿದರು.

error: Content is protected !!