ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಜೀವನಕ್ಕೆ ಕಾಲಿಟ್ಟ ಮರು ದಿನವೇ ಕೆಲಸಕ್ಕೆ ಹಾಜರಾಗುವಂತೆ ಭಾರತೀಯ ವಾಯು ಸೇನಾ ಯೋಧ ಮೊಹೀತ್ ರಾಥೋಡ್ಗೆ ಸೂಚನೆ ಬಂದಿದ್ದು, ತಕ್ಷಣವೇಸಪ್ತಪದಿ ತುಳಿದ ಒಂದು ದಿನದ ಬಳಿಕ ಕಚೇರಿಯ ಕೆಲಸಕ್ಕೆ ಹಾಜರಾಗಿದ್ದಾರೆ.
ಏಪ್ರಿಲ್ 17 ರಿಂದ ಮೇ 15ರವರೆಗೆ ಮದುವೆ ರಜೆಗೆ ರಾಥೋಡ್ ಬಂದಿದ್ದರು. ಇತ್ತ ಭಾರತ- ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಗುರುವಾರವಷ್ಟೇ ಸಪ್ತಪದಿ ತುಳಿದಿದ್ದ ರಾಥೋಡ್ಗೆ ತಮ್ಮ ರಜೆ ರದ್ದು ಮಾಡಲಾಗಿದ್ದು, ಇಸಪುರ್ ವಾಯು ಪಡೆಯಲ್ಲಿ ರಿಪೋರ್ಟ್ ಮಾಡುವಂತೆ ಸೇನೆಯಿಂದ ತುರ್ತು ಸೂಚನೆ ಬಂದಿತ್ತು.
ಹೀಗಾಗಿ ಮದುವೆ ಮರುದಿನವೇ ಮೋಹಿತ್ ರಾಥೋಡ್, ಸೇನೆಯ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗಿದ್ದು, ಈ ಕುರಿತು ಮಾತನಾಡಿರುವ ಮಾವ ಗೋಪಾಲ್ ರಾಥೋಡ್, ನನ್ನ ಅಳಿಯ ದೇಶದ ರಕ್ಷಣೆಗೆ ತೆರಳಿದ್ದಾರೆ. ಇದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಚಾರ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನಮಗೆ ದೇಶವೇ ಮೊದಲು, ಮದುವೆ ಶಾಸ್ತ್ರ ಮುಗಿಯುವವರೆಗೆ ನಾವು ಮಗಳಿಗೆ ಈ ವಿಷಯವನ್ನು ಹೇಳಿರಲಿಲ್ಲ. ಮೋಹಿತ್ ಪೋಷಕರು ಕೂಡ ಮಗ ದೇಶ ಸೇವೆಗೆ ಮರಳಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ದೇಶ ಮತ್ತು ಮಗನ ಸುರಕ್ಷತೆಗೆ ಅವರು ಪ್ರಾರ್ಥಿಸಿದ್ದಾರೆ.