ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಆಡಳಿತ ಸೇವೆಗಳ ನಿಯಂತ್ರಣ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಬದಲಾಯಿಸುವ ದೆಹಲಿ ಪ್ರದೇಶ ಸರ್ಕಾರ ತಿದ್ದುಪಡಿ ಮಸೂದೆ, 2023 ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಂಗೀಕಾರವಾಗಿದೆ.
ಆಮ್ ಆದ್ಮಿ ಪಕ್ಷ ಹಾಗೂ ಕೇಂದ್ರ ಸರ್ಕಾರದ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದ ಮಸೂದೆಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಗೃಹ ಸಚಿವ ಅಮಿತ್ ಶಾ ಈ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ್ದಾರೆ.
ಇದರ ಪರವಾಗಿ 131 ಮತಗಳು ಬಿದ್ದಿದ್ದರೆ, 102 ಮತಗಳು ವಿರೋಧವಾಗಿವೆ. ಬಿಜೆಡಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಸದಸ್ಯರು ಮಸೂದೆ ಅಂಗೀಕಾರಕ್ಕೆ ಬೆಂಬಲ ಸೂಚಿಸಿದ್ದು, ಮಸೂದೆ ಪಾಸ್ ಆಗಿದೆ. ಇನ್ನು ಮಸೂದೆ ಕಾನೂನಾಗಿ ಬದಲಾಗಲು ರಾಷ್ಟ್ರಪತಿಗಳ ಸಹಿ ಬೀಳಬೇಕಿದೆ, ತದನಂತರ ಅಧಿಕೃತ ಕಾನೂನಾಗಿ ಜಾರಿಯಾಗಲಿದೆ.
ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆಯ ಮೇಲೆ ದೆಹಲಿ ಸರ್ಕಾರ ಶಾಸಕಾಂಗ ಹಾಗೂ ಕಾರ್ಯಕಾರಿ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ತೀರ್ಪನ್ನು ರದ್ದುಗೊಳಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು.