ನಿತೀಶ್‌ ಕುಮಾರ್‌ ಸರ್ಕಾರಕ್ಕೆ ಹಿನ್ನಡೆ: ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಹೈಕೋರ್ಟ್ ತಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಳೆದ ವರ್ಷ ಮೀಸಲಾತಿ ಪ್ರಮಾಣವನ್ನು ಶೇ. 50ರಿಂದ ಶೇ. 65ಕ್ಕೆ ಹೆಚ್ಚಿಸಿದ್ದ ಬಿಹಾರ ಸರ್ಕಾರದ ಆದೇಶವನ್ನು ಪಾಟ್ನಾ ಹೈಕೋರ್ಟ್ ರದ್ದುಗೊಳಿಸಿದೆ.

ರಾಜ್ಯವ್ಯಾಪಿ ಜಾತಿ ಸಮೀಕ್ಷೆ ನಡೆಸಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣವನ್ನು ಕಳೆದ ವರ್ಷ ಹೆಚ್ಚಿಸಲಾಗಿತ್ತು. ರಾಜ್ಯ ಸರ್ಕಾರದ ಈ ಕ್ರಮವು ಸುಪ್ರೀಂ ಕೋರ್ಟ್ ಆದೇಶಿಸಿದ ಮೀಸಲಾತಿಯ ಶೇ. 50 ರ ಮಿತಿಯನ್ನು ಮೀರಿದೆ. ಹೀಗಾಗಿ ಪಾಟ್ನಾ ಹೈಕೋರ್ಟ್‌ ಇದನ್ನು ಸಂವಿಧಾನ ಬಾಹಿರ ಎಂದು ಕರೆದಿದೆ.

2023ರ ನವೆಂಬರ್‌ನಲ್ಲಿ ನಿತೀಶ್ ಕುಮಾರ್ ನೇತೃತ್ವ ಸರ್ಕಾರ ಜಾರಿಗೆ ತಂದ ಕಾನೂನನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶವನ್ನು ಹೊರಡಿಸಿದೆ.

ಅರ್ಜಿದಾರರ ಪರ ವಕೀಲರಲ್ಲಿ ಒಬ್ಬರಾದ ರಿತಿಕಾ ರಾಣಿ ಮಾತನಾಡಿ, ‘ಮೀಸಲಾತಿ ಕಾನೂನುಗಳ ಈ ತಿದ್ದುಪಡಿ ಸಂವಿಧಾನವನ್ನು ಉಲ್ಲಂಘಿಸುತ್ತವೆ ಎಂದು ನಾವು ಅರ್ಜಿ ಸಲ್ಲಿಸಿದ್ದೇವೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ಇಂದು ಆದೇಶ ಹೊರಡಿಸಿದೆʼ ಎಂದು ತಿಳಿಸಿದರು.

ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಶೇ. 50ರಿಂದ ಶೇ. 65ಕ್ಕೆ ಹೆಚ್ಚಿಸಲು ಬಿಹಾರ ವಿಧಾನಸಭೆ 2023ರ ನವೆಂಬರ್‌ನಲ್ಲಿ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು. ಪರಿಷ್ಕೃತ ಮೀಸಲಾತಿ ಕೋಟಾದಲ್ಲಿ ಎಸ್‌ಸಿ ವರ್ಗಕ್ಕೆ ಶೇ. 20, ಎಸ್‌ಟಿ ವರ್ಗಕ್ಕೆ ಶೇ. 2, ಒಬಿಸಿ ವರ್ಗಕ್ಕೆ ಶೇಕಡಾ 18 ಮತ್ತು ಇಬಿಸಿ ವರ್ಗಕ್ಕೆ ಶೇ. 25ರಷ್ಟು ಮೀಸಲಾತಿ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!