Thursday, January 1, 2026

ಇಂದೋರ್ ನಲ್ಲಿ ಕಲುಷಿತ ನೀರು ಸೇವಿಸಿ ಏಳು ಜನ ಸಾವು: ಆಸ್ಪತ್ರೆಗೆ ಸಿಎಂ ಮೋಹನ್ ಯಾದವ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಲುಷಿತ ನೀರು ಸೇವಿಸಿ ಅತಿಸಾರ ಮತ್ತು ವಾಂತಿಯಿಂದ ಇದುವರೆಗೆ ಏಳು ಜನ ಸಾವನ್ನಪ್ಪಿದ್ದಾರೆ ಎಂದು ಅದರ ಮೇಯರ್ ಪುಷ್ಯಮಿತ್ರ ಭಾರ್ಗವ ಬುಧವಾರ ದೃಢಪಡಿಸಿದ್ದಾರೆ.

ಭಾಗೀರಥಪುರ ಪ್ರದೇಶದಲ್ಲಿ ಅತಿಸಾರದಿಂದ ಮೂರು ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ. ಆದರೆ ನನಗೆ ತಿಳಿದ ಮಟ್ಟಿಗೆ, ಈ ಕಾಯಿಲೆಯಿಂದ ಬಳಲುತ್ತಿರುವ ಇನ್ನೂ ನಾಲ್ಕು ಜನರನ್ನು ಆಸ್ಪತ್ರೆಗಳಿಗೆ ಕರೆತರಲಾಯಿತು ಮತ್ತು ಅವರು ಸಹ ಸಾವನ್ನಪ್ಪಿದ್ದಾರೆ ಎಂದು ಮೇಯರ್ ವರದಿಗಾರರಿಗೆ ತಿಳಿಸಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಜನರನ್ನು ಭೇಟಿಯಾದರು. ಮುನ್ನೆಚ್ಚರಿಕಾ ಕ್ರಮವಾಗಿ ಮುನ್ಸಿಪಲ್ ಕಾರ್ಪೊರೇಷನ್ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದೆ, ಯಾವುದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಸೋರಿಕೆಯಿಂದಾಗಿ ಒಳಚರಂಡಿ ನೀರು, ಕುಡಿಯುವ ನೀರಿನ ಪೈಪ್‌ಲೈನ್‌ಗೆ ಪ್ರವೇಶಿಸಿದೆ. ಪರಿಣಾಮ ಭಾಗೀರಥಪುರ ಪ್ರದೇಶದಲ್ಲಿ ಅತಿಸಾರ ಮತ್ತು ವಾಂತಿ ಹರಡಲು ಕಾರಣವಾಯಿತು ಎಂದು ಭಾರ್ಗವ ಹೇಳಿದ್ದಾರೆ.

ಕಲುಷಿತ ನೀರು ಕುಡಿದು ಅಸ್ವಸ್ಥರಾಗಿರುವ 149 ರೋಗಿಗಳನ್ನು ನಗರದಾದ್ಯಂತ 27 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಮತ್ತು ಅವರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಘಟನೆಯ ಬಗ್ಗೆ ಮುಖ್ಯಮಂತ್ರಿ ಮೋಹನ್ ಯಾದವ್ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಎಲ್ಲಾ ರೋಗಿಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ತಿಳಿಸಿದ್ದಾರೆ.

error: Content is protected !!