ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸರು ಮುಕ್ತವಾಗಿ, ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮ ಪೊಲೀಸ್ ಸಿಬ್ಬಂದಿಗೆ ನಮನ ಸಲ್ಲಿಸಿ ಮಾತನಾಡಿದರು.
ಜನರ ಪ್ರಾಣ, ಆಸ್ತಿ ರಕ್ಷಿಸುವ ಪೊಲೀಸ್ ಸಿಬ್ಬಂದಿಯ ಹಿತ ರಕ್ಷಿಸಲು ಸರ್ಕಾರ ಬದ್ದವಾಗಿದೆ. ಇದಕ್ಕಾಗಿ 2025ರಲ್ಲಿ 10 ಸಾವಿರ ಪೊಲೀಸ್ ವಸತಿ ಮನೆಗಳ ನಿರ್ಮಾಣಕ್ಕೆ 2000 ಕೋಟಿ ನೀಡಿದ್ದೇವೆ. 200 ಕೋಟಿ ವೆಚ್ಚದಲ್ಲಿ 100 ಹೊಸ ಠಾಣೆಗಳ ನಿರ್ಮಾಣ ಆಗುತ್ತಿವೆ. ಪೊಲೀಸ್ ಮಕ್ಕಳಿಗಾಗಿ 7 ಪ್ರಮುಖ ಸ್ಥಳಗಳಲ್ಲಿ 7 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತದೆ ಎಂದು ಘೋಷಿಸಿದರು.
ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ 216 ಮಂದಿ, ರಾಜ್ಯದಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯದ ಮೇಲಿದ್ದಾಗಲೇ ಹುತಾತ್ಮರಾಗಿದ್ದಾರೆ. ಇವರ ಆತ್ಮಕ್ಕೆ ನಾನು ಶಾಂತಿ ಕೋರುತ್ತಲೇ ಕುಟುಂಬದವರ ದುಃಖದಲ್ಲಿ ಭಾಗಿ ಆಗುತ್ತೇನೆ. ದೇಶದಲ್ಲಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಾಗ, ಜನರ ಪ್ರಾಣ, ಮಾನ ಕಾಪಾಡುವ ಹೊತ್ತಲ್ಲಿ ಇವರೆಲ್ಲ ಹುತಾತ್ಮರಾಗಿದ್ದಾರೆ ಎಂದರು.