ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಏಳು ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಐದು ಮರಿಗಳು ಸೇರಿದಂತೆ ಏಳು ಹುಲಿಗಳು ಸಾವನ್ನಪ್ಪಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ. ದೀರ್ಘಕಾಲದ ಅನಾರೋಗ್ಯದ ನಂತರ ಹುಲಿ ಸಾವನ್ನಪ್ಪಿದರೆ, ಹುಲಿ ಮರಿಗಳು ತಮ್ಮ ತಾಯಿಯಿಂದ ಬೇರ್ಪಟ್ಟು ಹಸಿವಿನಿಂದಾಗಿ ಸಾವನ್ನಪ್ಪಿವೆ. ಈ ಘಟನೆಗಳ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ ಮೃಗಾಲಯದಲ್ಲಿ ತ್ರಿಶಾ ಎಂಬ ಹುಲಿ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 2010ರಲ್ಲಿ ತ್ರಿಷಾ ಹೆಸರಿನ ಹುಲಿಯನ್ನು ಕಾನ್ಪುರಕ್ಕೆ ಕರೆತರಲಾಗಿತ್ತು. ಇದುವರೆಗೂ ಮೃಗಾಲಯದಲ್ಲಿ 14 ಮರಿಗಳಿಗೆ ಜನ್ಮ ನೀಡಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ತ್ರಿಶಾ ಹುಲಿ ಅನಾರೋಗ್ಯಕ್ಕೆ ತುತ್ತಾಗಿ ಝೂಲಾಜಿಕಲ್ ಪಾರ್ಕ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು.
ಮಹಾರಾಷ್ಟ್ರದ ಚಂದ್ರಾಪುರದ ಜಮೀನಿನಲ್ಲಿ ಮಂಗಳವಾರ ಮತ್ತೊಂದು ಹುಲಿ ಸಾವನ್ನಪ್ಪಿದೆ. ಹುಲಿಯ ಸಾವಿಗೆ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ. ಈ ಹುಲಿಗೆ ಎರಡೂವರೆ ವರ್ಷ ಎಂದು ಅಂದಾಜಿಸಲಾಗಿದೆ. ಬಲ್ಲಾರ್ಪುರ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳು ಸಾವನ್ನಪ್ಪಿದ್ದು, ಒಂದು ಸಾಯುವ ಸ್ಥಿತಿಯಲ್ಲಿದ್ದು, ತಕ್ಷಣ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ದುರದೃಷ್ಟವಶಾತ್ ಅದು ಕೂಡ ಸತ್ತುಹೋಗಿದೆ.
ಕಳೆದ ವಾರ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ದಿನದಲ್ಲಿ ಎರಡು ಹುಲಿ ಮರಿಗಳು ಸಾವನ್ನಪ್ಪಿರುವುದು ಗೊತ್ತೇ ಇದೆ. ಒಂದೆಡೆ ಸರ್ಕಾರ ಹುಲಿಗಳ ಕಲ್ಯಾಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಪದೇ ಪದೇ ಹುಲಿಗಳು ಸಾವನ್ನಪ್ಪುತ್ತಿರುವುದು ವನ್ಯಜೀವಿ ಪ್ರಿಯರನ್ನು ಚಿಂತೆಗೀಡು ಮಾಡಿದೆ. ಈ ವರ್ಷದ ಕಳೆದ 9 ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ 9 ಹುಲಿ ಮರಿಗಳು ಸಾವನ್ನಪ್ಪಿವೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಹುಲಿ ಸಾವಿನ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. 2022ರಲ್ಲಿ ಒಟ್ಟು 28 ಹುಲಿಗಳು ಸಾವನ್ನಪ್ಪಿವೆ. ತಾಯಿ ತ್ಯಜಿಸಿದ ಕಾರಣ ಹುಲಿ ಮರಿಗಳು ಹಸಿವಿನಿಂದ ಸಾಯುತ್ತವೆ. ಈಗ ವನ್ಯಜೀವಿ ಅಧಿಕಾರಿಗಳು ಹೇಳುವಂತೆ ವಿದ್ಯುದಾಘಾತ ಮತ್ತು ಬೇಟೆಯಾಡುವಿಕೆಯು ಹುಲಿ ಮರಿಗಳ ಸಾವಿಗೆ ಪ್ರಮುಖ ಕಾರಣಗಳಾಗಿವೆ.