ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪಂಗಿ ರಾಮನಗರದ ಸಿಂಧ್ಯಾ ಆಸ್ಪತ್ರೆಯವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಮಗು ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ವೈದ್ಯರು ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿದೆ. ಗಂಟಲು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಅನಸ್ತೇಶಿಯಾ ಓವರ್‌ಡೋಸ್ ಆಗಿ ಮಗು ಮೃತಪಟ್ಟಿದೆ ಎನ್ನಲಾಗಿದೆ.
ಆಡನ್ ಮೈಕಲ್ ಎಂಬ 7 ವರ್ಷದ ಬಾಲಕನಿಗೆ ಊಟ ಮಾಡುವಾಗ ಗಂಟಲು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಪೋಷಕರು ಮಗನನ್ನು ಸಿಂಧ್ಯಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೈದ್ಯರು ಮಗುವಿಗೆ ಆಪರೇಷನ್ ಮಾಡಬೇಕು ಎಂದಿದ್ದು ಆಪರೇಷನ್ ವೇಳೆ ಡಾ.ಶ್ವೇತಾ ಪೈ ಎಂಬುವವರು ಬಾಲಕನಿಗೆ ಅನೆಸ್ತೇಷಿಯಾ ಕೊಟ್ಟಿದ್ದರು ಎನ್ನಲಾಗಿದೆ. ಅನಸ್ತೇಷಿಯಾ ನೀಡಿದ ಬಳಿಕ ಬಾಲಕ ಸಾವನ್ನಪ್ಪಿದ್ದಾನೆ. ಆದರೆ ಈ ವಿಷಯವನ್ನು ವೈದ್ಯರು ಪೋಷಕರಿಗೆ ತಿಳಿಸಿಲ್ಲ. ಬದಲಿಗೆ ಮಗುವಿಗೆ ಹೃದಯ ಸಮಸ್ಯೆಯಿದೆ ಎಂದು ನಾಟಕವಾಡಿದ್ದಾರೆ. ಈ ವಿಚಾರ ಪೋಷಕರಲ್ಲಿ ಅನುಮಾನ ಹುಟ್ಟಿಹಾಕಿದ್ದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆ ವೇಳೆ ಮಗು ಮೃತಪಟ್ಟಿದ್ದು ಬಯಲಾಗಿದೆ.
ಅನಸ್ತೇಷಿಯಾ ನೀಡಿದ ಬಳಿಕ 3 ಇಂಜೆಕ್ಷನ್ ಕೊಟ್ಟಿದ್ದು ಓವರ್ ಡೋಸ್ ಆಗಿ ನನ್ನ ಮಗ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ನಮಗಾದ ನೋವು ಇನ್ಯಾವ ಪೋಷಕರಿಗೂ ಆಗಬಾರದು, ಕಠಿಣ ಕ್ರಮ ಕೈಗೊಳ್ಳಿ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.