ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಹಮೂನ್ ಚಂಡಮಾರುತ ತೀವ್ರಗೊಂಡಿದ್ದು, ಮಂಗಳವಾರ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ. ಚಂಡಮಾರುತವು ಉತ್ತರ-ಈಶಾನ್ಯ ದಿಕ್ಕಿನಲ್ಲಿ ಚಲಿಸುತ್ತಿದ್ದು, ಸದ್ಯದ ಮುನ್ಸೂಚನೆಗಳ ಪ್ರಕಾರ ಅಕ್ಟೋಬರ್ 25ರ ಮಧ್ಯಾಹ್ನದ ವೇಳೆಗೆ ಬಾಂಗ್ಲಾದೇಶದ ಖೇಪುಪಾರ ಮತ್ತು ಚಿತ್ತಗಾಂಗ್‌ಗೆ ಅಪ್ಪಳಿಸಲಿದೆ.
ಈ ಚಂಡಮಾರುತದಿಂದಾಗಿ ಮಣಿಪುರ, ಮಿಜೋರಾಂ, ತ್ರಿಪುರಾ, ಮೇಘಾಲಯ ಮತ್ತು ದಕ್ಷಿಣ ಅಸ್ಸಾಂ ಪ್ರದೇಶಗಳು ಮಳೆಯಿಂದ ಪ್ರಭಾವಿತವಾಗುವ ಸಾಧ್ಯತೆಯಿದೆ.
ಅಕ್ಟೋಬರ್ 26ರ ವೇಳೆಗೆ ಚಂಡಮಾರುತದ ತೀವ್ರತೆ ಕಡಿಮೆಯಾಗುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 25 ರವರೆಗೆ ಒಡಿಶಾ ಕರಾವಳಿಯಲ್ಲಿ ಗಂಟೆಗೆ 40-60 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ. ಅಕ್ಟೋಬರ್ 24 ರ ಬೆಳಿಗ್ಗೆಯಿಂದ ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕರಾವಳಿಯಲ್ಲಿ ಈ ಮಾರುತಗಳು ಪ್ರಾರಂಭವಾಗುತ್ತವೆ. ಅಕ್ಟೋಬರ್ 25 ರಂದು ಮಿಜೋರಾಂ, ತ್ರಿಪುರಾ, ದಕ್ಷಿಣ ಅಸ್ಸಾಂ ಮತ್ತು ಮಣಿಪುರದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.