ಲೈಂಗಿಕ ದೌರ್ಜನ್ಯ ಆರೋಪ: ಮೌನ ಮುರಿದ ಆರ್‌ಸಿಬಿ ಆಟಗಾರ ಯಶ್ ದಯಾಳ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಆರ್‌ಸಿಬಿ ತಂಡದ ಆಟಗಾರ ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 69ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು,ಇದರ ಬೆನ್ನಲ್ಲೇ ಈ ವಿಷಯದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

27 ವರ್ಷದ ಯಶ್ ದಯಾಳ್ ತನ್ನ ವಿರುದ್ಧ ಆರೋಪ ಮಾಡಿರುವ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಖುಲ್ದಾಬಾದ್ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾರೆ. ದೂರಿನಲ್ಲಿ, ಮಹಿಳೆ ಐಫೋನ್ ಮತ್ತು ಲ್ಯಾಪ್‌ಟಾಪ್ ಕದ್ದಿದ್ದಾರೆ ಎಂದು ದಯಾಳ್ ಆರೋಪಿಸಿದ್ದಾರೆ.

2021 ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಆ ಮಹಿಳೆಯ ಪರಿಚಯವಾಯಿತು ನಂತರ ಅವರು ಪರಸ್ಪರ ಸಂವಹನ ನಡೆಸಲು ಪ್ರಾರಂಭಿಸಿದರು. ಇದಾಗಿ ಶಾಪಿಂಗ್‌ಗಾಗಿ ಅವಳು ಪದೇ ಪದೇ ತನ್ನಿಂದ ಹಣವನ್ನು ಸಾಲವಾಗಿ ಪಡೆದಿದ್ದಳು. ಇದಕ್ಕೆ ತನ್ನ ಬಳಿ ಪುರಾವೆಗಳಿವೆ ಎಂದು ದಯಾಳ್ ಆರೋಪಿಸಿದ್ದಾರೆ.

ಈ ಮಹಿಳೆ ತನ್ನ ವಿರುದ್ಧ ಗಾಜಿಯಾಬಾದ್ ಪೊಲೀಸರಿಗೆ ದೂರು ನೀಡಿದ್ದಾಳೆಂದು ತಿಳಿದಾಗ, ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾಗಿ ದಯಾಳ್ ಹೇಳಿದ್ದಾರೆ.

ಮೂರು ಪುಟಗಳ ದೂರಿನಲ್ಲಿ, ಯಶ್ ದಯಾಳ್ ಅವರು ಮಹಿಳೆ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರು ಮತ್ತು ಇತರ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

ಇತ್ತ ಮಹಿಳೆ ತನ್ನ ದೂರಿನಲ್ಲಿ ಯಶ್ ಕಳೆದ ಐದು ವರ್ಷಗಳಿಂದ ತನ್ನೊಂದಿಗೆ ಸಂಬಂಧ ಹೊಂದಿದ್ದು, ಲೈಂಗಿಕ ಶೋಷಣೆಗೆ ಗುರಿಯಾಗಿದ್ದೇನೆ ಎಂದು ಆರೋಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!