ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆಯ ಬೆಳಗೊಳ ಗ್ರಾಮದಲ್ಲಿ ಮನೆ ಎದುರು ಆಟವಾಡುತ್ತಿದ್ದ ಮೂರುವರೆ ವರ್ಷದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 59 ವರ್ಷದ ವ್ಯಕ್ತಿಗೆ ಮಂಡ್ಯ 2ನೇ ಜಿಲ್ಲಾ ಸೆಷನ್ ಕೋರ್ಟ್ ಜೀವಾವಧಿ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
2023ರ ಡಿಸೆಂಬರ್ 11ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾಲಕಿ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ, ಆಕೆಯ ನೆರೆಯವನಾದ ಶಿವಣ್ಣ ಎಂಬಾತ ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದ. ಬಳಿಕ ಇದು ಅಮ್ಮನಿಗೆ ಹೇಳಬೇಡ ಎಂದು ಮಗುವಿಗೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಗೊಂಡಿದೆ.
ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕೃಷ್ಣರಾಜ ಸಾಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ 2012ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅದನ್ನಷ್ಟು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಸಾಕ್ಷ್ಯಾಧಾರ ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಯಿತು.
ಮಂಡ್ಯ 2ನೇ ಜಿಲ್ಲಾ ಸೆಷನ್ ಕೋರ್ಟ್‌ನ ನ್ಯಾಯಾಧೀಶ ದಿಲೀಪ್ ಕುಮಾರ್ ಅವರು ಪ್ರಕರಣದ ಪರಿಶೀಲನೆಯ ನಂತರ ಆರೋಪಿಗೆ ಜೀವಿತಾವಧಿ ಕಾರಾಗೃಹ ಶಿಕ್ಷೆ ಜೊತೆಗೆ 1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದರು.